ಹೀಗೆ ಬೃಹತ್ ಬ್ಯಾಗ್ ಏರಿಸಿಕೊಂಡು ಈತ ಹೊರಡಿದ್ದೆಲ್ಲಿಗೆ ಗೊತ್ತಾ?

ಆತ 28ರ ಹರೆಯದ ಯುವಕ. ಎಲ್ಲರಂತೆ ಸಿಕ್ಕ ಉದ್ಯೋಗವನ್ನ ಮಾಡಿಕೊಂಡು ಜೀವನ ಸಾಗಿಸುವುದನ್ನ ಬಿಟ್ಟು ಆತ ಸಹ್ಯಾದ್ರಿ ಪರ್ವತ ಶ್ರೇಣಿಯನ್ನ ಪಾದಯಾತ್ರೆ ಮೂಲಕ ಸಂಚರಿಸಲು ಮುಂದಾಗಿ ಯಶಸ್ವಿಯಾಗಿದ್ದಾನೆ. ಸುಮಾರು 40 ದಿನಗಳಲ್ಲಿ ಪಶ್ಚಿಮ ಘಟ್ಟದ ಸಹ್ಯಾದ್ರಿ ಪರ್ವತ ಶ್ರೇಣಿಯ ಸಾವಿರಾರು ಕಿಲೋ ಮೀಟರ್ ದೂರವನ್ನ ಕಾಲ್ನಡಿಗೆಯಲ್ಲೇ ಸಂಚರಿಸಿ ಟ್ರಾನ್ಸ್ ಸಹ್ಯಾದ್ರಿ ಅಭಿಯಾನವನ್ನ ಪೂರ್ಣಗೊಳಿಸಿದ್ದಾನೆ. ಈ ಮೂಲಕ ಜನರಲ್ಲಿ ಪರಿಸರವನ್ನ ಉಳಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಯುವಕ ಮುಂದಾಗಿದ್ದು ಈ ಕುರಿತು ಒಂದು ವರದಿ.
ಹೀಗೆ ಬೃಹತ್ ಬ್ಯಾಗೊಂದನ್ನ ಹೆಗಲಿಗೇರಿಸಿಕೊಂಡು ಕಡಿದಾದ ಗುಡ್ಡವನ್ನ ಏರುತ್ತಿರುವ ಉತ್ತರಕನ್ನಡ ಜಿಲ್ಲೆಯ ಕಾರವಾರ ಸಿದ್ಧರ ಗ್ರಾಮದ 28 ವರ್ಷದ ಸುಶಾಂತ. ಈತ ವಿದ್ಯಾಭ್ಯಾಸ ಮುಗಿಸಿದ ಬಳಿಕ ಮುಂಬೈ ಹಾಗೂ ಪೂನಾದಲ್ಲಿ ಉದ್ಯೋಗ ಮಾಡಿಕೊಂಡಿದ್ದ. ಮೌಂಟನೇಯರಿಂಗ್ ಕೋರ್ಸ್ ಮಾಡಿರುವ ಸುಶಾಂತ ಪರ್ವತಗಳನ್ನ ಏರುವ ಸಾಹಸಿಗಳನ್ನ ಚಾರಣಕ್ಕೆ ಕರೆದೊಯ್ಯುವ ಕೆಲಸವನ್ನ ಮಾಡುತ್ತಿದ್ದ. ಮೊದಲಿನಿಂದಲೂ ಟ್ರೆಕ್ಕಿಂಗ್ ನಂತಹ ಸಾಹಸಮಯ ಕೆಲಸದಲ್ಲಿ ಆಸಕ್ತಿ ಹೊಂದಿದ್ದರಿಂದ ಏನನ್ನಾದರೂ ಸಾಧಿಸಬೇಕೆನ್ನುವ ಛಲ ಹೊಂದಿದ್ದ. ಆತ ಆಯ್ಕೆ ಮಾಡಿಕೊಂಡಿದ್ದು ಟ್ರಾನ್ಸ್ ಸಹ್ಯಾದ್ರಿ ಅಡ್ವೆಂಚರ್. ಇದೇ ಜನವರಿ 7 ರಂದು ಗುಜರಾತ್ಗಡಿಯಲ್ಲಿರುವ ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯ ಸಾಹ್ಲೇರಗಡದಿಂದ ಸುಶಾಂತ್ ಟ್ರಾನ್ಸ್ ಸಹ್ಯಾದ್ರಿ ಅಭಿಯಾನವನ್ನ ಪ್ರಾರಂಭಿಸಿದ್ದ. ಸಹ್ಯಾದ್ರಿ ಪರ್ವತ ಶ್ರೇಣಿಯ ತಪ್ಪಲಿನಲ್ಲಿ ಪ್ರತಿನಿತ್ಯ 30-40 ಕಿಲೋ ಮೀಟರ್ ಸಂಚರಿಸುತ್ತಿದ್ದನಂತೆ. ಕತ್ತಲಾಗುತ್ತಿದ್ದಂತೆ ಹತ್ತಿರದಲ್ಲಿ ಸಿಗುತ್ತಿದ್ದ ಗ್ರಾಮಗಳಲ್ಲಿ ಉಳಿದುಕೊಳ್ಳುತ್ತಿದ್ದ. ಜನವಸತಿ ಗ್ರಾಮಗಳು ಸಿಗದಿದ್ದಲ್ಲಿ ಟೆಂಟನ್ನ ಸುರಕ್ಷಿತ ಸ್ಥಳದಲ್ಲಿ ಹಾಕಿಕೊಂಡು ಅಲ್ಲಿಯೇ ಅಡುಗೆ ತಯಾರಿಸಿ ವಾಸ್ತವ್ಯ
ಮಾಡುತ್ತಿದ್ದನಂತೆ. ಟ್ರಾನ್ಸ್ ಸಹ್ಯಾದ್ರಿ ಅಭಿಯಾನ ಆರಂಭಿಸಿದ್ದ ಸುಶಾಂತ್ ದಟ್ಟ ಅರಣ್ಯ ಹಾಗೂ ರಸ್ತೆಯಲ್ಲಿ ಸಂಚರಿಸಿ 40 ದಿನಗಳಲ್ಲಿ ಗುಜರಾತ್ ನಿಂದ ಮಹಾರಾಷ್ಟ್ರ, ಗೋವಾ ದಾಟಿ ಸುಮಾರು 1200 ಕಿಲೋ ಮೀಟರ್ ದೂರ ಕ್ರಮಿಸಿ ಉತ್ತರಕನ್ನಡ ಜಿಲ್ಲೆಯ ಕಾರವಾರದ ಸಿದ್ಧರ ಗ್ರಾಮಕ್ಕೆ ಬಂದು ತಲುಪಿದ್ದಾನೆ.

ಟ್ರಾನ್ಸ್ ಸಹ್ಯಾದ್ರಿ ಅಭಿಯಾನದ ಜೊತೆಗೆ ಮಾರ್ಗ ಮದ್ಯೆ ಸಿಗುವ ಶಿವಾಜಿ ಮಹಾರಾಜರ ಕಾಲದ ಸುಮಾರು 26 ಕೋಟೆಗಳಿಗೂ ಸಹ ಸುಶಾಂತ್ ಭೇಟಿ ನೀಡಿದ್ದಾನೆ. ಕೋಟೆಗಳು ನಮ್ಮ ಇತಿಹಾಸವನ್ನ ಸಾರುವ ಪಳೆಯುಳಿಕೆಗಳಾಗಿದ್ದು ಅವುಗಳನ್ನ ರಕ್ಷಿಸಬೇಕಾದ ಅಗತ್ಯ ಇದೆ. ನಿಸರ್ಗ ನಮ್ಮ ಸಾಕಷ್ಟು ಅವಶ್ಯಕತೆಗಳನ್ನ ಪೂರೈಸಿದ್ದು ಅದರ ರಕ್ಷಣೆ ಮಾಡಿದಲ್ಲಿ ಮುಂದಿನ ಪೀಳಿಗೆಗೆ ನಾವು ಅದನ್ನ ಉಳಿಸಿಕೊಳ್ಳಬಹುದು. ಇಲ್ಲವಾದಲ್ಲಿ ಈ ವೈವಿಧ್ಯಮಯ ಪರಿಸರ ನಾಶವಾಗಲಿದ್ದು ಹೀಗಾಗಿ ಎಲ್ಲರೂ ಅದರ ರಕ್ಷಣೆ ಮಾಡಿ ಅನ್ನೋ ಸಂದೇಶವನ್ನ ಸುಶಾಂತ್ ಅಭಿಯಾನದ ಮೂಲಕ ನೀಡುತ್ತಿದ್ದಾನೆ. ಪಾದಯಾತ್ರೆ ಮೂಲಕ ಸುಶಾಂತ ಸ್ವಗ್ರಾಮಕ್ಕೆ ಮರಳಿದ್ದು
ಈತನ ಸಾಧನೆಯನ್ನ ಕಂಡು ಸಾಕಷ್ಟು ಸಂಘ, ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ಸುಶಾಂತನ ಸಾಧನೆ ಎಲ್ಲರಿಗೂ ಮಾದರಿಯಾಗಿದ್ದು ಪರಿಸರದ ರಕ್ಷಣೆಗೆ ಎಲ್ಲರೂ ಮುಂದಾಗಬೇಕು ಅನ್ನೋದು ಸಾರ್ವಜನಿಕರ ಅಭಿಪ್ರಾಯ.

ಒಟ್ಟಾರೇ ಪರಿಸರವನ್ನ ಉಳಿಸುವ ನಿಟ್ಟಿನಲ್ಲಿ ಸುಶಾಂತ ಮಾಡಿದ ಅಭಿಯಾನ ವಿಶಿಷ್ಟವಾಗಿದ್ದು ಈತನ ಸಾಧನೆ ಎಲ್ಲರಿಗೂ ಮಾದರಿಯಾಗಿದೆ. ನಿಸರ್ಗದಿಂದ ಸಾಕಷ್ಟು ಲಾಭ ಪಡೆದುಕೊಂಡಿರುವ ನಾವುಗಳು ಅದನ್ನ
ಉಳಿಸಿ ಬೆಳೆಸಬೇಕಾದ ಕಾರ್ಯಕ್ಕೆ ಮುಂದಾಗಬೇಕು ಅನ್ನೋದು ನಮ್ಮ ಆಶಯ…‘

ವರದಿ: ಉದಯ ಬರ್ಗಿ ಬಿಟಿವಿ ನ್ಯೂಸ್ ಕಾರವಾರ