ಕಲಬುರಗಿಯಲ್ಲಿ ಭುಗಿಲೆದ್ದ ಉರ್ದು ನಾಮಫಲಕ ವಿವಾದ

ಕಲಬುರಗಿ ನಗರದಲ್ಲಿ ಈಗ ಮತ್ತೆ ಉರ್ದು ನಾಮಫಲಕ ವಿವಾದ ಭುಗಿಲೆದ್ದಿದೆ. ಕಳೆದ ವರ್ಷವಷ್ಟೇ ನೂತನವಾಗಿ ಉದ್ಘಾಟನೆಗೊಂಡಿರುವ ಕಲಬುರಗಿ ಮಹಾನಗರ ‌ಪಾಲಿಕೆ ಕಟ್ಟಡದ ಮೇಲೆ ಕೆಲ ತಿಂಗಳ ಹಿಂದೆಯಷ್ಟೇ ಕಿಡಿಗೇಡಿಗಳು ಕನ್ನಡ ನಾಮಫಲಕಕ್ಕೆ ಮಸಿ ಬಳಿದಿದ್ದರು. ಬಳಿಕ ಕೆಲದಿನಗಳ ನಂತರ ಕೆಲ ಕಿಡಿಗೇಡಿಗಳು ರಾತ್ರೋರಾತ್ರಿ ಉರ್ದು ನಾಮಫಲಕ ಅಳವಡಿಸಿ ಕನ್ನಡಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಮತ್ತೆ ಉರ್ದು ಬೋರ್ಡ್ ವಿವಾದ ಭುಗಿಲೆದ್ದಿದೆ. ಆದರೆ ಈ ಬಾರಿ ಉರ್ದು ಬೋರ್ಡ್ ಹಾಕಿಸಿದ್ದು ಮೇಯರ್ ಪುತ್ರ…

ad

 

ಹೌದು, ಕಲಬುರಗಿ ಮಹಾನಗರ ಪಾಲಿಕೆಯ ಕಟ್ಟಡದ ಮೇಲೆ ಮತ್ತೆ ಉರ್ದು ಬೋರ್ಡ್ ಪ್ರತ್ಯಕ್ಷವಾಗಿದ್ದು ಕನ್ನಡಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ನಿನ್ನೆ ರಾತ್ರಿ 11 ಗಂಟೆಯ ಸುಮಾರಿಗೆ ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಮಲ್ಲಮ್ಮ ವಳಕೇರಿ ಪುತ್ರ ಕಾಂಗ್ರೆಸ್ ಕಾರ್ಪೊರೇಟರ್ ಗಣೇಶ್ ವಳಕೇರಿ ನೇತೃತ್ವದಲ್ಲಿ ಉರ್ದು ಹಾಗೂ ಇಂಗ್ಲೀಷ್ ಭಾಷೆ ಬೋರ್ಡ್ ಅಳವಡಿಸಲಾಗಿದೆ. ಸಹಜವಾಗಿಯೇ ಇದು ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಇಂದು ಬೆಳಗ್ಗೆ ಕಲಬುರಗಿ ಮಹಾನಗರ ಪಾಲಿಕೆ ಕಚೇರಿ ಎದುರು ಜಮಾವಣೆಗೊಂಡ ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರು ಹಾಗೂ ಕಲಬುರಗಿ ಮಹಾನಗರ ‌ಪಾಲಿಕೆ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದರು. ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಕಾಂಗ್ರೆಸ್ ಕಾರ್ಪೊರೇಟರ್‌ಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಕಲಬುರಗಿ ಮಹಾನಗರ ಪಾಲಿಕೆಯ ಕಚೇರಿ ಬಳಿ ಆಗಮಿಸಿದ ಮಹಾನಗರ ಪಾಲಿಕೆ ಆಯುಕ್ತ ಆರ್.ಎಸ್.ಪೆದ್ದಪ್ಪಯ್ಯಗೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮುತ್ತಿಗೆ ಹಾಕಿದರು. ತಕ್ಷಣವೇ ಉರ್ದು ನಾಮಫಲಕ ಅಳವಡಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ಬಗ್ಗೆ ಕಟ್ಟಡದ ಬಳಿ ಇರುವ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಆಧರಿಸಿ ತಪ್ಪೆಸಗಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಇದಕ್ಕೆ ಸುಮ್ಮನಾಗದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಕಲಬುರಗಿ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯರು ಪ್ರತಿಭಟನೆ ಮುಂದುವರೆಸಿದರು. ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಕಲಬುರಗಿ ಎಸ್‌ಪಿ ಎನ್.ಶಶಿಕುಮಾರ್ ಭೇಟಿ ನೀಡಿ ಪ್ರತಿಭಟನಾ ನಿರತರ ಮನವೊಲಿಸಲು ಯತ್ನಿಸಿದರು. ಪ್ರತಿಭಟನಾ ನಿರತ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಪೊರೇಟರ್‌ಗಳನ್ನು ಬ್ರಹ್ಮಪೂರ ಠಾಣೆ ಪೊಲೀಸರು ವಶಕ್ಕೆ‌ ಪಡೆದಿದ್ದಾರೆ.

ಒಟ್ಟಾರೆ 55 ಸದಸ್ಯರಿರುವ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ 10ಕ್ಕಿಂತ ಹೆಚ್ಚು ಉರ್ದು ಭಾಷಿಗ ಕಾಂಗ್ರೆಸ್ ಪಾಲಿಕೆ ಸದಸ್ಯರಿದ್ದು ಈ ಹಿಂದೆಯಿಂದಲೂ ಉರ್ದು ನಾಮಫಲಕ ಅಳವಡಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದರೆ ಈ ಹಿಂದೆಯೇ ಉರ್ದು ನಾಮಫಲಕ ಅಳವಡಿಸದಂತೆ ಸರ್ಕಾರದಿಂದ ನಿರ್ದೇಶನ ಬಂದಿದೆ.‌

 

ಆದರೂ ಕಾಂಗ್ರೆಸ್ ಸದಸ್ಯರು ಕಾನೂನು ಬಾಹಿರವಾಗಿ ಉರ್ದು ಬೋರ್ಡ್ ಅಳವಡಿಸುವ ಮೂಲಕ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆಂದು ಬಿಜೆಪಿ ಆರೋಪಿಸಿದೆ. ಒಟ್ಟಿನಲ್ಲಿ ಉರ್ದು ನಾಮಫಲಕ ವಿವಾದ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳಂತೂ ಕಾಣುತ್ತಿಲ್ಲ.

ವರದಿ: ಅನಿಲ್ ಸ್ವಾಮಿ, ಬಿ ಟಿವಿ ನ್ಯೂಸ್ ಕಲಬುರಗಿ.