ರವಿಬೆಳಗೆರೆ ಜೈಲು ಭವಿಷ್ಯ : ನಿರ್ಧಾರ ಕಾಯ್ದಿಟ್ಟುಕೊಂಡ ವಿಧಾನಸಭೆ !!

ಪತ್ರಕರ್ತ ರವಿಬೆಳೆಗೆರೆಗೆ ಸ್ಪೀಕರ್ ಜೈಲು ಶಿಕ್ಷೆ ವಿಧಿಸಿದ ಪ್ರಕರಣ ಸಂಬಂಧಿಸಿ ಇಂದು ಅಸೆಂಬ್ಲಿಗೆ ಹಾಜರಾಗಲು ಬೆಳೆಗೆರೆ ಪರ ವಕೀಲ ಶಂಕರಪ್ಪ ಸುವರ್ಣ ಸೌಧಕ್ಕೆ ಆಗಮಿಸಿದ್ದರು. ಆದರೆ ವಕೀಲ ಶಂಕರಪ್ಪ ಅವರಿಗೆ ಅಸೆಂಬ್ಲಿಯಲ್ಲಿ ವಾದ ಮಂಡಿಸಲು ಅವಕಾಶ ಸಿಗಲಿಲ್ಲ

ಪ್ರಕರಣದ ಹಿನ್ನಲೆ :
ಶಾಸಕರೊಬ್ಬರ ಮಾನಹಾನಿ ಸಂಬಂಧಿಸಿ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ವಿರುದ್ದ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ದಾಖಲಾಗಿತ್ತು. ಹಕ್ಕು ಭಾದ್ಯತಾ ಸಮಿತಿಯ ಅಧ್ಯಕ್ಷ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ತನಿಖೆ ನಡೆದು ಸ್ಪೀಕರ್ ಗೆ ವರದಿ ಸಲ್ಲಿಸಲಾಗಿತ್ತು. ಹಕ್ಕು ಭಾದ್ಯತಾ ಸಮಿತಿಯ ಶಿಫಾರಸ್ಸು ಮತ್ತು ಸದನದಲ್ಲಿ ನಡೆದ ಚರ್ಚೆಯಂತೆ ರವಿ ಬೆಳಗೆರೆಗೆ ಒಂದು ವರ್ಷದ ಜೈಲು ಶಿಕ್ಷೆಯನ್ನು ನೀಡಲಾಗಿತ್ತು. ಹಕ್ಕು ಬಾಧ್ಯತಾ ಸಮಿತಿಯ ಶಿಫಾರಸ್ಸಿನಂತೆ ವಾಗ್ದಂಡೆ ವಿಧಿಸುವುದು ಮಾಮೂಲಾದರೂ, ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ್ದು ಇದೇ ಮೊದಲಾದ್ದರಿಂದ ಸ್ಪೀಕರ್ ಕ್ರಮ ಭಾರೀ ಚರ್ಚೆಗೆ ಒಳಗಾಗಿತ್ತು.

ಸ್ಪೀಕರ್ ತೀರ್ಪನ್ನು ಜಾರಿ ಮಾಡಲು ಪೊಲೀಸರು ನಿರ್ಧರಿಸಿದ್ದಾಗ ರವಿ ಬೆಳಗೆರೆ ಆಸ್ಪತ್ರೆ ದಾಖಲಾಗಿದ್ದರು. ಬೆಂಗಳೂರು ಪ್ರೆಸ್ ಕ್ಲಬ್ ನ ಸಕಾಲಿಕ ಮದ್ಯ ಪ್ರವೇಶದಿಂದ ಬಂಧನ ತಪ್ಪಿತ್ತು.

ಸ್ಪೀಕರ್ ತೀರ್ಪನ್ನು ಪ್ರಶ್ನಿಸಿ ರವಿ ಬೆಳಗೆರೆ ನಂತರ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ನಲ್ಲಿ ಮೂರು ದಿನ ವಾದ ವಿವಾದ ನಡೆದು ಅಂತಿಮವಾಗಿ, ಸ್ಪೀಕರ್ ಎದುರು ಪುನರ್ ಪರಿಶೀಲನಾ ಅರ್ಜಿ ಹಾಕಲು ಅವಕಾಶ ನೀಡಬೇಕು, ಅಲ್ಲಿಯವರೆಗೂ ಬಂಧಿಸಬಾರದು ಎಂದು ತೀರ್ಪು ನೀಡಿತ್ತು.

ಹೈಕೋರ್ಟ್ ತೀರ್ಪಿನಂತೆ ರವಿ ಬೆಳಗೆರೆ ಸ್ಪೀಕರ್ ಕಚೇರಿಗೆ ಆಗಮಿಸಿ ತೀರ್ಪು ಪುನರ್ ಪರಿಶೀಲನಾ ಅರ್ಜಿ ಹಾಕಿದ್ದರು.

ಸದನದಲ್ಲಿ ಇಂದೇನು ? :
ರವಿಬೆಳಗೆರೆ ಅಂದು ಸ್ಪೀಕರ್ ಕಚೇರಿಯಲ್ಲಿ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ಸದನದಲ್ಲಿ ಸ್ಪೀಕರ್ ಮಂಡಿಸಬೇಕು. ಅದಕ್ಕಾಗಿ ನವೆಂಬರ್ 17 ಅನ್ನು ನಿಗಧಿಗೊಳಿಸಲಾಗಿತ್ತು. ಆದರೆ ನವೆಂಬರ್ 17 ಬೇರೆ ಕಲಾಪಗಳು ಇದ್ದಿದ್ದರಿಂದ ನವೆಂಬರ್ 20 ರಂದು ಅರ್ಜಿಯನ್ನು ಟೇಬಲ್ ಮಾಡಲಾಗುತ್ತಿದೆ. ಈ ಪ್ರಕ್ರಿಯೆಯ ಮಾಹಿತಿಯನ್ನು ರವಿ ಬೆಳಗೆರೆ ಪರ ವಕೀಲರಿಗೆ ನೀಡಲಾಗಿತ್ತು ‌. ವಕೀಲರನ್ನು ಸದನಕ್ಕೆ ಕರೆದಿರಲಿಲ್ಲ. ಸದನದಲ್ಲಿ ವಕೀಲರ ವಾದ ಮಂಡನೆಗೆ ಅವಕಾಶ ನೀಡುವುದಿಲ್ಲ. ಪುನರ್ ಪರಿಶೀಲನಾ ಅರ್ಜಿ ಈಗಾಗಲೇ ಸಲ್ಲಿಕೆಯಾಗಿದ್ದು, ಸದನ ಅದರ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ ಎಂಬುದು ವಿಧಾನಸಭಾ ಸಚಿವಾಲಯದ ಅಧಿಕಾರಿಗಳ ಮಾತು.