ತಾಯಿಯಂತೆ ನಾಯಿಮರಿಗಳಿಗೆ ಹಾಲುಣಿಸುವ ಮಾರ್ಜಾಲ!!

ಬೆಕ್ಕು ಮತ್ತು ನಾಯಿ ಪರಮ ಶತ್ರುಗಳು ಅಂತಾರೆ. ಎಲ್ಲೋ ರಸ್ತೆಯಲ್ಲಿ ನಾಯಿಗೆ ಬೆಕ್ಕು ಎದುರಾದ್ರೆ ನಾಯಿ ಬೆಕ್ಕನ್ನು ಅಟ್ಟಿಸಿಕೊಂಡು ಹೋಗೋದನ್ನು ನೀವೆಲ್ಲ ನೋಡಿರ್ತೀರಾ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಬೆಕ್ಕೊಂದು ನಾಯಿಮರಿಗಳ ಪಾಲಿಗೆ ಆಪ್ತವಾಗಿದ್ದು, ತಾಯಿಯಂತೆ ನಾಯಿಮರಿಗಳಿಗೆ ಹಾಲುಣಿಸಿ ಸಲಹುತ್ತಿದೆ. ಬೆಳ್ತಂಗಡಿ ತಾಲೂಕಿನ ಸೋಮಂತಡ್ಕದ ಮೋಹನ್ ನಾಯ್ಕ್ ಎಂಬುವವರ ಮನೆಯಲ್ಲಿ ಇಂತಹದೊಂದು ಅಪರೂಪದ ಘಟನೆ ನಡೆಯುತ್ತಿದೆ. ಇವರ ಮನೆಯ ಬೆಕ್ಕು ಪ್ರತಿದಿನ ಬೆಳಗ್ಗೆ ನಾಯಿಮರಿಗಳಿಗೆ ಹಾಲು ನೀಡುತ್ತದೆ.
ಪ್ರತಿನಿತ್ಯ 5 ರಿಂದ 6 ನಾಯಿಮರಿಗಳು ಬೆಕ್ಕಿನ ಮೊಲೆ ಹಾಲನ್ನು ಕುಡಿಯುತ್ತದೆ. ತಾಯಿಯ ಮಮತೆಯನ್ನು ತೋರಿಸುವ ಬೆಕ್ಕು ಎಂದೂ ಹಾಲಿಗಾಗಿ ಬರುವ ನಾಯಿಮರಿಗಳನ್ನು ದೂರ ಮಾಡಿಲ್ಲ. ನಾಯಿ ಮರಿಗಳು ಹತ್ತಿರ ಬಂದೊಡನೇ ಮಲಗಿಕೊಂಡು ಅವುಗಳಿಗೆ ಹಾಲನ್ನು ನೀಡುತ್ತದೆ.ಬೆಕ್ಕು ಮತ್ತು ನಾಯಿಮರಿಗಳ ಸಂಬಂಧ ಮನೆಯವರಿಗೂ ಆಶ್ಚರ್ಯ ತಂದಿದೆ.