ತಿಂಗಳಾದ್ರೂ ಪತ್ತೆಯಾಗಿಲ್ಲ ಮೀನುಗಾರರು. ಹೋದವರ ಸುಳಿವೂ ಇಲ್ಲ, ತನಿಖೆಯಲ್ಲೂ ಪ್ರಗತಿ ಇಲ್ಲ.. ದೇವರ ಮೊರೆ ಹೋದ ಬಂಧುಗಳು

ಸುವರ್ಣ ತ್ರಿಭುಜ ಹತ್ತಿ ಹೋದ ಏಳು ಮಂದಿ ಮೀನುಗಾರರು ಮಲ್ಪೆ ಬಂದರು ಬಿಟ್ಟು ಭರ್ತಿ ಒಂದು ತಿಂಗಳಾಯ್ತು. ಹೋದವರ ಸುಳಿವೂ ಇಲ್ಲ, ತನಿಖೆಯಲ್ಲಿ ಪ್ರಗತಿಯೂ ಇಲ್ಲ. ಮಹತ್ವದ ಮಾಹಿತಿ ಇದೆ ಎಂದು ಹೇಳುತ್ತಿದ್ದ ಗೃಹ ಸಚಿವರು ಮಾತು ಬದಲಿಸಿದ್ದಾರೆ, ಬಂಧುಗಳನ್ನು ಕಾಣದೆ ಕಂಗಾಲಾದ ಮೀನುಗಾರರು ಮಾಲ್ತಿ ದೇವಿಗೆ ಶರಣು ಹೋಗಿದ್ದಾರೆ.

ad

 

ಉಡುಪಿ ಜಿಲ್ಲೆಯ ಮಲ್ಪೆ ಬಂದರಿನಲ್ಲಿ ಸ್ಮಶಾನ ಮೌನವಿದೆ. ಬಂದರು ಬಿಟ್ಟು ಹೋದವರು ಎಲ್ಲಿಗೆ ತಲುಪಿದ್ದಾರೋ ಗುತ್ತಿಲ್ಲ. ಜನವರಿ 13 ಕ್ಕೆ ಮೀನುಗಾರರು ಊರು ಬಿಟ್ಟು ಭರ್ತಿ ಒಂದು ತಿಂಗಳಾಗುತ್ತೆ, ಏಳು ಮಂದಿ ಮೀನುಗಾರರು ದಡ ಸೇರದ ಕಾರಣ ಕುಟುಂಬ ವರ್ಗ ಹಾಗೂ ಮೀನುಗಾರ ಬಂಧುಗಳು ಕಂಗಾಲಾಗಿದ್ದಾರೆ, ಬೊಬ್ಬರ್ಯ ದೈವದ ನುಡಿಕೇಳಿ ಕಾರ್ಯೋನ್ಮುಖರಾದ ಇವರು ಈಗ ಮಾಲ್ತಿ ದೇವಿಗೆ ಶರಣು ಹೋಗಿದ್ದಾರೆ. ಕಡಲ ನಡುವಲ್ಲೇ ಇರುವ ಈ ಪ್ರಾಕೃತಿಕ ದೇಗುಲದಲ್ಲಿ ಮಾಲ್ತಿ ದೇವಿಯ ಆರಾಧನೆ ನಡೆಸಿದ್ದಾರೆ. ಮೊಗವೀರ ಸಮುದಾಯ ಅತಿಯಾಗಿ ವಿಶ್ವಾಸವಿಟ್ಟ ಮಾಲ್ತಿ ದೇವಿಗೆ ಪೂಜೆಕೊಟ್ಟು ಕಾಣೆಯಾದ ಮೀನುಗಾರರು ಮರಳಿಬರಲೆಂದು ಪ್ರಾರ್ಥನೆ ಸಲ್ಲಿಸಲಾಗಿದೆ.

ನಾಪತ್ತೆ ಪ್ರಕರಣದ ಬಗ್ಗೆ ಕೇಳಿದ್ರೆ ಗೃಹ ಸಚಿವ ಎಂ.ಬಿ.ಪಾಟೀಲ್ ಸುಳಿವು ಸಿಕ್ಕಿದೆ ಅಂತಾರೆ. ಈಗ ಕೇಳಿದ್ರೆ ನಾನು ಹಾಗೆ ಹೇಳೇ ಇಲ್ಲ ಅಂತಾರೆ. ಮಾಲ್ವಾನ್ ಕಡಲಲ್ಲ್ಲಿ ಸಿಕ್ಕ ಸುಟ್ಟ ಫೋಮ್ ಮತ್ತು ಟಬ್ ಗಳನ್ನು ಕಾಣೆಯಾದ ಬೋಟಿಗೆ ಸಂಬಂಧಿಸಿದ ಪರಿಕರ ಎಂದು ನಂಬಲು ಮೀನುಗಾರರು ಸಿದ್ದರಿಲ್ಲ. ನಮ್ಮನ್ನು ದಿಕ್ಕು ತಪ್ಪಿಸಲು ಈ ರೀತಿ ಸಚಿವರು ಸುಳ್ಳು ಹೇಳ್ತಿದಾರೆ ಅನ್ನೋದು ಮೀನುಗಾರರ ಆಕ್ರೋಶ. ರಾಜ್ಯ ಸರ್ಕಾರ ಇಸ್ರೋಗೆ ಮಾಹಿತಿಯೇ ಕೊಟ್ಟಿಲ್ಲ ಅನ್ನೋದು ಕೇಳಿ ಇವರ ಕೋಪ ಮತ್ತಷ್ಟು ಹೆಚ್ಚಿದೆ. 20 ದಿನಗಳ ಬಳಿಕ ಮೀನುಗಾರರು ಕಡಲಿಗಿಳಿದಿದ್ದಾರೆ. ಮೀನು ಹಿಡಿಯೋದರ ಜೊತೆಗೆ, ನಾಪತ್ತೆಯಾದ ಬೋಟಿನ ಸುಳಿವೇನಾದರೂ ಸಿಕ್ಕುತ್ತಾ ಎಂದು ಹುಡುಕಾಟ ನಡೆಸಲು ಮುಂದಾಗಿದ್ದಾರೆ. ನೋವಿನಲ್ಲೇ ಹೊರಟ ಮೀನುಗಾರರು ಸರ್ಕಾರದ ದಿಂದ ಆಗದ ಕೆಲಸವನ್ನು ನಾವೇ ಮಾಡ್ತೇವೆ ಎಂದು ನಿರ್ಧರಿಸಿದ್ದಾರೆ.

ವೈಜ್ಞಾನಿಕ ಕಾರ್ಯಾಚರಣೆಯಲ್ಲಿ ಫಲ ಸಿಕ್ಕಿಲ್ಲ. ಧಾರ್ಮಿಕ ನಂಬಿಕೆಯ ತಳಹದಿಯಲ್ಲಾದರೂ ಕಾಣೆಯಾದವರ ಕುರುಹು ಸಿಗುತ್ತಾ ಅನ್ನೋ ಆಸೆ ಮೀನುಗಾರರದ್ದು. ಪಶ್ಚಿಮ ಕರಾವಳಿಯ ಇತಿಹಾಸದಲ್ಲೇ ಇಂತಹಾ ಪ್ರಕರಣ ಮೊದಲ ಬಾರಿ ಸಂಭವಿಸಿದೆ. ಕಾಣೆಯಾದವರು ಎಲ್ಲಿದ್ದಾರೆಂದು ಪಶ್ಚಿಮ ಕರಾವಳಿಯಿಂದ ಬೀಸಿ ಬರುತ್ತಿರುವ ಅಲೆಗಳಷ್ಟೇ ಸಾಕ್ಷಿ ಹೇಳಬೇಕು.