7 ವರ್ಷಗಳ‌ ಬಳಿಕ ಹೆತ್ತವರ ಮಡಿಲು ಸೇರಿದ ಬಾಲೆ- ಹಾಸನದ ಹುಡುಗಿ ಮೈಸೂರಿನಲ್ಲಿ ಪತ್ತೆ! //Girl reunites with her family after 7 years-hassan girl found in Mysuru

 

ad

 

7 ವರ್ಷಗಳ ಹಿಂದೆ ಕಾಣೆಯಾಗಿದ್ದ ಕರುಳಬಳ್ಳಿಯೊಂದು ಮರಳಿ ಪೋಷಕರ ಮಡಿಲಿಗೆ ಸೇರಿರುವ ಅಪರೂಪದ ಘಟನೆ ಹಾಸನ ಜಿಲ್ಲೆ ಬೇಲೂರಿನಲ್ಲಿ ನಡೆದಿದೆ… 15 ವರ್ಷದ ರೇಖಾ ಎಂಬಾಕೆಯೇ ಎಲ್ಲೋ ಇದ್ದು ಸದ್ಯ ಹೆತ್ತವರ ಮಡಿಲು ಸೇರಿಕೊಂಡ ಅದೃಷ್ಟವಂತೆ. ಬೇಲೂರು ತಾಲೂಕು ದೇವೀಹಳ್ಳಿ ಗ್ರಾಮದ ಹನುಮಂತಬೋವಿ ಎಂಬುವರ ಪುತ್ರಿ ರೇಖಾ 4 ನೇ ತರಗತಿ ಓದುತ್ತಿದ್ದಾಗ ಶಾಲೆಗೆ ಹೋದವಳು ಮನೆಗೆ ಬಾರದೇ ದಿಢೀರ್ ನಾಪತ್ತೆ ಯಾಗಿದ್ದಳು.

 

ಕೂಲಿ ಮಾಡಿ ಬದುಕುತ್ತಿರುವ ಪೋಷಕರು, ಕರುಳ ಕುಡಿಗಾಗಿ ಹುಡುಕಾಡಿ ಕೊನೆಗೆ ಪೊಲೀಸರಿಗೆ ಹಾಗೂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಕಾಣೆಯಾದ ಮಕ್ಕಳ ಬ್ಯೂರೋಗೆ ಬಾಲಕಿಯ ಫೋಟೋ ಹಾಗೂ ಸ್ವವಿವರವನ್ನು ರವಾನೆ ಮಾಡಿದ್ದರು. ಫೋಟೋ ಪರಿಶೀಲನೆ ಹಾಗೂ ತಪಾಸಣೆ ವೇಳೆ, ರೇಖಾ ಮಂಡ್ಯ ಜಿಲ್ಲೆಯ ಬಾಲಕಿಯರ ಬಾಲಮಂದಿರದಲ್ಲಿ ಇದ್ದಾಳೆ ಎಂಬುದು ಪತ್ತೆಯಾಗಿತ್ತು.

 

 

 

ಕೂಡಲೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಮಂಡ್ಯ ಬಾಲಕಿಯರ ಬಾಲಮಂದಿರ ಸಂಪರ್ಕ ಮಾಡಿದಾಗ ರೇಖಾಗೆ 14 ವರ್ಷ ತುಂಬಿರುವುದರಿಂದ ಆಕೆಯನ್ನು ಮೈಸೂರಿನ ಬಾಲಕಿಯರ ಬಾಲಮಂದಿರಕ್ಕೆ ಕಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಯಿತು. ಇದಾದ ಬಳಿಕ ರೇಖಾಳನ್ನು ಮೈಸೂರಿನಿಂದ ಕರೆತಂದು ಇದೀಗ ಅಧಿಕಾರಿಗಳ ಸಮ್ಮುಖದಲ್ಲಿ ಪೋಷಕರ ವಶಕ್ಕೆ ಒಪ್ಪಿಸಲಾಗಿದೆ. ನಾಲ್ಕನೇ ತರಗತಿ ಓದುವಾಗ ಕಾಣೆಯಾಗಿದ್ದ ರೇಖಾ, ಇದೀಗ ಫಸ್ಟ್ ಕ್ಲಾಸ್ ನಲ್ಲಿ ಎಸ್ ಎಸ್ ಎಲ್ ಸಿ ಪಾಸು ಮಾಡಿದ್ದಾಳೆ. ಪ್ರತಿಭಾವಂತ ಮಗಳು 8 ವರ್ಷಗಳ ನಂತರ ಮರಳಿ ಮನೆಗೆ ಬಂದಿರುವುದು ಬಡ ಪೋಷಕರು ಹಾಗೂ ಇಡೀ ಕುಟುಂಬದಲ್ಲಿ ಸಂತಸಕ್ಕೆ ಕಾರಣವಾಗಿದೆ.