ಬದುಕಿದ್ದ ವ್ಯಕ್ತಿಯನ್ನೇ ಶವಾಗಾರಕ್ಕೆ ಹಾಕಿದ್ರು- ಮರಣೋತ್ತರ ಪರೀಕ್ಷೆ ವೇಳೆ ಬಯಲಾಯ್ತು ಸತ್ಯ- ಇದು ಕಿಮ್ಸ್​ ವೈದ್ಯರ ಎಡವಟ್ಟು!

Kim's Hospital Doctors Negligence in Hubli

ರಾಜ್ಯದಲ್ಲಿ ವೈದ್ಯರ ಎಡವಟ್ಟುಗಳ ಸರಣಿ ಮುಂದುವರೆದಿದೆ. ಹೌದು ಬದುಕಿದ್ದ ವ್ಯಕ್ತಿಯನ್ನೇ ಮೃತ ಎಂದು ಘೋಷಿಸಿದ ವೈದ್ಯರು ಆತನನ್ನು ಶವಾಗಾರದಲ್ಲಿಟ್ಟಿದ್ದು, ಮರಣೋತ್ತರ ಪರೀಕ್ಷೆ ವೇಳೆ ಮತ್ತೆ ಬದುಕಿರುವುದನ್ನು ಮನಗಂಡು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೇ ಚಿಕಿತ್ಸೆ ಫಲಕಾರಿಯಾಗದೇ ಆತ ಕೊನೆಗೂ ಮತ್ತೆ ಸಾವನ್ನಪ್ಪಿದ್ದಾನೆ.

ಹೌದು ಇದು ಹುಬ್ಬಳ್ಳಿಯ ಕಿಮ್ಸ್​ ವೈದ್ಯರ ಮಹಾಎಡವಟ್ಟು. ವೈದ್ಯರ ಈ ಎಡವಟ್ಟಿನಿಂದ ಬದುಕಬಹುದಾಗಿದ್ದ ಯುವಕನೊಬ್ಬ ಸಾವಿ ಮನೆ ಸೇರಿದ್ದು, ಆತನ ಕುಟುಂಬಸ್ಥರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹುಬ್ಬಳ್ಳಿಯ ಆನಂದ ನಗರ ನಿವಾಸಿ ಪ್ರವೀಣ್ ಮೂಳೆ (೨೩) ಕಾರ್ ಅಪಘಾತದಲ್ಲಿ ಗಾಯಗೊಂಡಿದ್ದ. ನಿನ್ನೆ ಸಂಜೆ 7 ಗಂಟೆ ವೇಳೆಗೆ ಗಾಯಗೊಂಡಿದ್ದ ಪ್ರವೀಣ್​​ನನ್ನು ನಿನ್ನೆ ಸಂಜೆ 8 ಸುಮಾರಿಗೆ ಕಿಮ್ಸ್​ಗೆ ದಾಖಲಿಸಲಾಗಿತ್ತು. ರಾತ್ರಿ 3 ಗಂಟೆ ವೇಳೆಗೆ ಕಿಮ್ಸ್​ ವೈದ್ಯರು ಆತ ಸತ್ತಿದ್ದಾನೆ ಎಂದು ಘೋಷಿಸಿ ಶವಾಗಾರಕ್ಕೆ ಸಾಗಿಸಿದ್ದರು.
ಆದರೇ ಇಂದು ಮುಂಜಾನೆ 10 ಗಂಟೆಯ ವೇಳೆಗೆ ಮರಣೋತ್ತರ ಪರೀಕ್ಷೆ ನಡೆಸುವಾಗ ಪ್ರವೀಣ್​ ಬದುಕಿರುವ ಸಂಗತಿ ಬೆಳಕಿಗೆ ಬಂದಿದೆ. ತಕ್ಷಣ ಆತನನ್ನು ಸಂಬಂಧಿಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

 

 

ಆದರೇ ಆಸ್ಪತ್ರೆಗೆ ದಾಖಲಿಸುವ ದಾರಿ ಮಧ್ಯೆ ಪ್ರವೀಣ ಸಾವನ್ನಪ್ಪಿದ್ದಾನೆ. ಪರಿಶೀಲಿಸಿದ ಖಾಸಗಿ ಆಸ್ಪತ್ರೆ ವೈದ್ಯರು ಆತ 20 ನಿಮಿಷಗಳ ಹಿಂದೆ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ನೀಡಿದ್ದಾರೆ. ಇದು ಸಂಬಂಧಿಕರ ಆಕ್ರೋಶಕ್ಕೆ ಕಾರಣವಾಯಿತು.  ಬದುಕಿದ್ದವನನ್ನು ಸತ್ತಿದ್ದಾನೆ ಎಂದು ಘೋಷಿಸಿದ ಕಿಮ್ಸ್​ ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಂಬಂಧಿಕರು ಆಸ್ಪತ್ರೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಅಷ್ಟೇ ಅಲ್ಲ ಕಿಮ್ಸ್​ ಸಿಬ್ಬಂದಿಯನ್ನು ಕಚೇರಿಯಿಂದ ಹೊರಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಪೊಲೀಸರು ಸಂಬಂಧಿಕರನ್ನು ನಿಯಂತ್ರಿಸಲು ಯತ್ನಿಸಿದರು. ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಪಿ ರೇಣುಕಾ ಸುಕುಮಾರ್​, ವೈದ್ಯರ ನಿರ್ಲಕ್ಷ್ಯ ಎಂದು ಪ್ರಕರಣ ದಾಖಲಿಸಿಕೊಂಡಿದ್ದೇವೆ. ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತೇವೆ. ಅವಶ್ಯಕತೆ ಬಿದ್ದರೇ ಮಾತ್ರ ವಶಕ್ಕೆ ಪಡೆಯುತ್ತೇವೆ ಎಂದರು. ಒಟ್ಟಿನಲ್ಲಿ ದೇವರ ರೂಪದಲ್ಲಿ ರೋಗಿಗಳ ಪ್ರಾಣ ಕಾಪಾಡಬೇಕಿದ್ದ ವೈದ್ಯರಿಂದಲೇ ವ್ಯಕ್ತಿಯೊಬ್ಬನ ಪ್ರಾಣ ಹಾರಿಹೋಗಿದ್ದು, ಬದುಕಿದ್ದ ವ್ಯಕ್ತಿ ಶವಾಗಾರದಲ್ಲಿ ಕೊಳೆಯುವಂತಾಗಿದ್ದು ಮಾತ್ರ ದುರಂತವೇ ಸರಿ.