ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ದುಡ್ಡಿದ್ದರೇ ದುನಿಯಾ!!

ಸರ್ಕಾರಿ ಆಸ್ಪತ್ರೆ ಇರೋದೆ ಬಡವರು ಹಾಗೂ ದೀನದಲಿತರ ಆರೋಗ್ಯ ಸೇವೆಗಾಗಿ ಆದರೇ ಸರ್ಕಾರಿ ಆಸ್ಪತ್ರೆಗಳು ಮಾತ್ರ ಬಡವರ ಸುಲಿಗೆಗೆ ನಿಂತಿದೆ. ಹೌದು ಕೊಪ್ಪಳದ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ ಡಾ.ಎಸ್.ಎಂ ಮಲ್ಕಾಪುರೆ ರೋಗಿಯೊಬ್ಬರ ಬಳಿ ಚಿಕಿತ್ಸೆಗಾಗಿ ಹಣ ಕೇಳಿದ ವಿಡಿಯೋ ನಮಗೆ ಲಭ್ಯವಾಗಿದ್ದು, ಹಸಿ-ಹಸಿ ಭ್ರಷ್ಟಾಚಾರ ಬಯಲಾಗಿದೆ.

ಕಳೆದ ಒಂದು ವಾರದ ಹಿಂದೆ ಕೊಪ್ಪಳ ನಿವಾಸಿ ದೊಡ್ಡಬಸಪ್ಪ ಎಂಬುವರರು ತಮ್ಮ ಪತ್ನಿಯ ಕಾಲು ಮೂಳೆ ಮುರಿದಿದ್ದರಿಂದ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಅಲ್ಲಿನ ಕೀಲು-ಎಲುಬು ತಜ್ಞರಾದ ಡಾ.ಗುರುರಾಜ ಎಂಬುವವರು ಶಸ್ತ್ರಚಿಕಿತ್ಸೆ ಆಗಬೇಕು. ಅದಕ್ಕೆ 5 ಸಾವಿರ ರೂಪಾಯಿ ವೆಚ್ಚವಾಗುತ್ತದೆ ಎಂದಿದ್ದರು. ಆದರೇ ಶಸ್ತ್ರಚಿಕಿತ್ಸೆ ಬಳಿಕ 15 ಸಾವಿರ ಕೇಳಿದ್ದಾರೆ. ಇದರಿಂದ ಕಂಗಾಲಾದ ದೊಡ್ಡಬಸಪ್ಪನವರು ನಿರ್ದೇಶಕರಾದ ಎಂ.ಎಸ್.ಮಲ್ಕಾಪುರೆ ಕೇಳಿದ್ದಕ್ಕೆ ಖಾಸಗಿ ಆಸ್ಪತ್ರೆಗೆ ಹೋಗಿದ್ದರೇ ಇದಕ್ಕೆ 1 ಲಕ್ಷ ಆಗ್ತಿತ್ತು. ಇಲ್ಲಿ ಕಡಿಮೆ ಇದೆ. 12 ಸಾವಿರ ಕೊಡಿ ಎಂದು ಡಿಮ್ಯಾಂಡ್ ಮಾಡಿದ್ದಾರೆ.

ಅಲ್ಲದೇ ನಾವು ಆಸಕ್ತಿ ತಗೊಂಡು ಕಡಿಮೆ ದುಡ್ಡಿನಲ್ಲಿ ಚಿಕಿತ್ಸೆ ಕೊಟ್ಟಿದ್ದೇವೆ. ಇಲ್ಲದೇ ಇದ್ದರೇ ನಿಮ್ಮ ಪೆಶೇಂಟ್ ಸತ್ತು ಹೋಗ್ತಿದ್ದರು ಅಂತೆಲ್ಲ ಹಗುರವಾಗಿ ಮಾತಾಡಿದ್ದು, ರೋಗಿಗಳ ಸಂಬಂಧಿಕರ ಆಕ್ರೋಶಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗಳು ಹಣ ಪೀಕುವ ಯಂತ್ರಗಳಾಗಿರೋದು ಮಾತ್ರ ದುರಂತವೇ ಸರಿ.