ಮೋದಿ ಕಾರ್ಯಕ್ರಮಕ್ಕಿಲ್ಲ ಯಾವುದೇ ಅಡ್ಡಿ-ಫೆ.೪ ರಂದು ಬಂದ್ ಮಾಡುವಂತಿಲ್ಲ- ಹೈಕೋರ್ಟ್ ಮಹತ್ವದ ಆದೇಶ- ಸಂಘಟನೆಗಳಿಗೆ ಚಾಟಿ ಬೀಸಿದ ನ್ಯಾಯಾಲಯ!

Order from High Court -No Bandh on Feb 4.

ಮೋದಿ ಆಗಮನದ ದಿನದಂದು ಬಂದ್ ನಡೆಸುವ ಸಂಘಟನೆಗಳ ಪ್ಲಾನ್ ಗೆ ಹೈಕೋರ್ಟ್ ಬ್ರೇಕ್ ಹಾಕಿದ್ದು ಫೆ‌.೪ ರಂದು ಕರೆನೀಡಲಾಗಿದ್ದ ಬಂದ್ ಸಂವಿಧಾನ ಬಾಹಿರ ಎಂದು ಅಭಿಪ್ರಾಯಿಸಿದೆ.

 

ಹೀಗಾಗಿ ಮೋದಿ ಆಗಮನದ ವೇಳೆ ಬಂದ್ ನಡೆಸಿ ಅವಾಂತರ ಸೃಷ್ಟಿಸುವ ಸಂಘಟನೆಗಳ ಉದ್ದೇಶ ವಿಫಲವಾಗಿದ್ದು ಬಿಜೆಪಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.  ಹೌದು ಬಿಜೆಪಿಯ ಬಹುನೀರಿಕ್ಷಿತ ಪರಿವರ್ತನಾ ಸಮಾರೋಪ‌ಸಮಾರಂಭ ಹಾಗೂ ಚುನಾವಣಾ ಪೂರ್ವ ಸಭೆಗಾಗಿ ಪ್ರಧಾನಿ‌ನರೇಂದ್ರ‌ಮೋದಿ ಫೆ. ೪ ರಂದು ನಗರಕ್ಕೆ ಆಗಮಿಸಲಿದ್ದಾರೆ. ಬಿಜೆಪಿ ಅಧಿಕೃತ ಚುನಾವಣೆಯ ರಣಕಹಳೆ ಎಂದೇ ಬಿಂಬಿತವಾಗುತ್ತಿರುವ ಈ ಕಾರ್ಯಕ್ರಮ ಕ್ಕಾಗಿ ಬಿಜೆಪಿ ಈಗಾಗಲೇ ಭರ್ಜರಿ ಸಿದ್ಧತೆ ಕೂಡಾ ನಡೆಸಿದೆ. ಆದರೇ ವಿವಿಧ ಕನ್ನಡ ಪರ ಸಂಘಟನೆಗಳು ಮೋದಿ ಆಗಮನದ ವೇಳೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರು ಬಂದ ನಡೆಸಲು ಸಿದ್ಧತೆ ನಡೆಸಿದ್ದವು. ಇದು ಕಾಂಗ್ರೆಸ್ ಪ್ರೇರಿತ ಬಂದ್ ಎಂದು ಬಿಜೆಪಿ ಕಿಡಿಕಾರಿತ್ತು.

 

ಈ‌ ಮಧ್ಯೆ ಬೆಂಗಳೂರು ಬಂದ್ ವಿರೋಧಿಸಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ದಾಖಲಾಗಿತ್ತು. ಇದೀಗ ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಲಯ ಫೆ.೪ ರಂದು ಬೆಂಗಳೂರು ಬಂದ್ ಮಾಡುವಂತಿಲ್ಲ ಎಂದು ಆದೇಶಿಸಿದೆ. ನ್ಯಾಯಮೂರ್ತಿಗಳಾದ ಎಚ್.ಜಿ.ರಮೇಶ್ ಹಾಗೂ ದಿನೇಶ್ ನೇತೃತ್ವದ ವಿಭಾಗೀಯ ಪೀಠ ಆದೇಶಿಸಿದ್ದು, ಸುಪ್ರೀಂ ಕೋರ್ಟ್ ನ ತೀರ್ಪಿನ ಅನ್ವಯ್ ಬಂದ್ ಮಾಡುವಂತಿಲ್ಲ ಎಂದಿದೆ‌.
ಬಂದ್‌ಮಾಡುವುದರಿಂದ ಜನಸಾಮಾನ್ಯರ ಜೀವನಕ್ಕೆ ತೊಂದರೆಯಾಗುತ್ತದೆ. ಇದು ಅವರ ಮೂಲಭೂತ ಹಕ್ಕಿಗೆ ಧಕ್ಕೆ ತರೋದರಿಂದ ಬಂದ್ ಸಂವಿಧಾನ ಬಾಹಿರ ಎಂದು ನ್ಯಾಯಾಲಯ ಆದೇಶಿಸಿದೆ. ಇದರಿಂದ ಮತ್ತೊಂದು ಬಂದ್ ನಡೆಸಿ ಜನಜೀವನ ಅಸ್ತವ್ಯಸ್ತ ಮಾಡುವ ಸಿದ್ಧತೆ ನಡೆಸಿದ್ದ ಸಂಘಟನೆಗಳಿಗೆ ಹೈಕೋರ್ಟ್ ಚಾಟಿ ಬೀಸಿದೆ. ಇನ್ನೊಂದೆಡೆ ರಾಜ್ಯ ಬಿಜೆಪಿ ಪ್ರಧಾನಿ ಮೋದಿ ಎದುರು ಆಗಬಹುದಾಗಿದ್ದ ಭಾರಿ ಮುಖಭಂಗವೊಂದನ್ನು ತಪ್ಪಿಸಿಕೊಂಡಂತಾಗಿದೆ.