ಕಂಬಳದ ಗೌಜಿಗೆ ಸುಪ್ರಿಂ ಅಸ್ತು ! ಈ ಬಾರಿಯ ಕಂಬಳ ಹೇಗಿರಬೇಕು ?!

ಕೃಷಿ ಪರಂಪರೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಹಾಗೂ ಕರಾವಳಿ ಕೃಷಿಕರ ಜೀವಾಳ ಎನಿಸಿರುವ ಜಾನಪದ ಕಂಬಳ ಕ್ರೀಡೆಗೆ ಇದ್ದ ಕಾರ್ಮೋಡ ಮರೆಯಾಗಿದೆ. ರಾಜ್ಯ ಸರಕಾರ ಕಂಬಳ ಕ್ರೀಡೆಗೆ ನೀಡಿದ್ದ ಅನುಮತಿಗೆ ತಡೆಯಾಜ್ಞೆ ನೀಡಲು ಸುಪ್ರಿಂ ಕೋರ್ಟ್ ನಿರಾಕರಿಸಿದೆ.ಸುಪ್ರಿಂ ಕೊರ್ಟ್‌ನ ಮಹತ್ವದ ತೀರ್ಪು ಹೊರಬಿದ್ದ ಹಿನ್ನೆಲೆಯಲ್ಲಿ ಕಳೆದೊಂದು ತಿಂಗಳಿಂದ ಇನ್ನೇನು ಕರಾವಳಿಯ ಜಾನಪದ ಕ್ರೀಡೆ ಕಂಬಳ ಇತಿಹಾಸ ಸೇರಲಿದೆಯೇ ಎನ್ನುವ ಆತಂಕದಲ್ಲಿದ್ದ ಸಮಸ್ತ ಕರಾವಳಿಗರ ಮೊಗದಲ್ಲಿ ಸಂತಸದ ಛಾಯೆ ಹೊರಹೊಮ್ಮಿದೆ. ಕರಾವಳಿಯಲ್ಲಿ ಈ ಬಾರಿ ಕಂಬಳ ಆಯೋಜನೆಗೆ ಸುಪ್ರಿಂ ಕೋರ್ಟ್ ಹಸಿರು ನಿಶಾನೆ ತೋರಿಸಿರುವುದರಿಂದ ದೇಶ ವಿದೇಶಗಳ ಕಂಬಳಾಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.

ಕಂಬಳ ಕ್ರೀಡೆ ಸಂಪೂರ್ಣವಾಗಿ ರದ್ದಾಗುವ ಭೀತಿಯಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿಯು ನೇತೃತ್ವ ವಹಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಕಂಬಳ ಕ್ರೀಡೆ ಆಯೋಜನೆಗೆ ಅವಕಾಶ ನೀಡುವಂತೆ ಒತ್ತಡ ಹೇರಿತ್ತು. ಕಂಬಳ ನಿಷೇಧಿಸಿರುವುದನ್ನು ಪ್ರಶ್ನಿಸಿ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿಯು ಹೈಕೋರ್ಟ್‌ಗೆ ತಕರಾರು ಅರ್ಜಿಯನ್ನು ಸಲ್ಲಿಸಿತ್ತು. ಆಗ ಕಂಬಳ ಕ್ರೀಡೆಗೆ ವಿಧಿಸಿದ್ದ ನಿಷೇಧವನ್ನು ಹೈಕೋರ್ಟ್ ತಾತ್ಕಾಲಿಕವಾಗಿ ತೆರವು ಗೊಳಿಸಿ ಷರತ್ತುಬದ್ಧ ಅನುಮತಿ ನೀಡಿತ್ತು. ನಂತರದ ಬೆಳವಣಿಗೆಯಲ್ಲಿ ಜಲ್ಲಿಕಟ್ಟು ವಿವಾದ ಉಂಟಾಗಿ ಕರ್ನಾಟಕದಲ್ಲಿ ಕಂಬಳ ಕ್ರೀಡೆ ಆತಂಕದಲ್ಲಿ ಇತ್ತು. ಆಗ ಮದ್ಯ ಪ್ರವೇಶ ಮಾಡಿದ ರಾಜ್ಯ ಸರಕಾರ ಕಾಯ್ದೆ ತಿದ್ದುಪಡಿ ಮಾಡಿ ಕಂಬಳಕ್ಕೆ ಅವಕಾಶ ನೀಡಿತ್ತು. ಇದು ಸುಪ್ರಿಂ ಕೋರ್ಟ್ ಅಂಗಳದವರೆಗೂ ಹೋಗಿ, ರಾಜ್ಯ ಸರಕಾರದ ನಿರ್ಧಾರಕ್ಕೆ ತಡೆಯಾಜ್ಞೆ ಕೊಡಬೇಕು ಎಂದು ಪ್ರಾಣಿಪ್ರಿಯರು ಅರ್ಜಿ ಸಲ್ಲಿಸಿದ್ದರು. ಸದ್ಯ ಸುಪ್ರಿಂ ಆದೇಶ ಕರಾವಳಿ ಕಂಬಳ ಪ್ರಿಯರಿಗೆ ನಿರಾಳತೆಯನ್ನು ತಂದಿದೆ‌.

ಕಂಬಳದ ನಿಷೇಧದ ಬಿಸಿಯ ಹಿನ್ನೆಲೆಯಲ್ಲಿ ಇಡೀ ಕರಾವಳಿ ಮಾತ್ರವಲ್ಲದೆ ದೇಶ ವಿದೇಶಗಳ ತುಳುವರು ಇಂದು ಸುಪ್ರಿಂ ಕೋರ್ಟ್ ತೀರ್ಪಿನತ್ತಾ ಗಮನ ಇಟ್ಟಿದ್ದರು.
ಮುಂದಿನ ದಿನಗಳಲ್ಲಿ ಕಂಬಳ ನಿಷೇದದ ಪ್ರಸ್ತಾಪ ಬರಬಾರದು ಎಂದುಕೊಂಡಿದ್ದರೆ ಕಂಬಳ ಆಯೋಜಕರು ಹೈಕೋರ್ಟ್ ಈ ಹಿಂದೆ ವಿಧಿಸಿದ ಈ ಷರತ್ತುಗಳನ್ನು ಪಾಲಿಸಿದ್ರೆ ಉತ್ತಮ

೧. ಕಂಬಳ ಆಯೋಜಕರು ಕ್ರೀಡೆಯಲ್ಲಿ ಪಾಲ್ಗೊಳ್ಳುವ ಕೋಣಗಳಿಗೆ ಯಾವುದೇ ರೀತಿಯ ಹಿಂಸೆ ನೀಡುವಂತಿಲ್ಲ.

೨. ಕಂಬಳ ಸಂದರ್ಭ ಕೋಣಗಳ ಕಿವಿ ಹಾಗೂ ಇತರೆ ಯಾವುದೇ ಅಂಗಾಂಗಗಳನ್ನು ಘಾಸಿ ಅಥವಾ ಹಾನಿಗೊಳಿಸುವಂತಿಲ್ಲ.

೩. ಕೋಣಗಳಿಗೆ ಮತ್ತು ತರಿಸುವಂತಹ ಪದಾರ್ಥಗಳನ್ನು ನೀಡುವಂತಿಲ್ಲ.

೪. ಯಾವುದೇ ಸಂದರ್ಭಗಳಲ್ಲಿ ಕೋಣಗಳ ದೇಹಕ್ಕೆ ಹೊಡೆಯುವಂತಿಲ್ಲ ಹಾಗೂ ಯಾವುದೇ ವಸ್ತುವಿನಿಂದ ಕೋಣಗಳ ದೇಹಕ್ಕೆ ಚುಚ್ಚಬಾರದು ಮತ್ತು ದೈಹಿಕವಾಗಿ ಗಾಯಗೊಳಿಸಿ ಪೀಡಿಸಬಾರದು.

೫. ಕಿರಿಕಿರಿಯಾಗುವಂತಹ ರಾಸಾಯನಿಕ ಪದಾರ್ಥಗಳನ್ನು ಕೋಣಗಳ ದೇಹಕ್ಕೆ ಉಜ್ಜಬಾರದು.

೬. ಕಂಬಳದ ಕೋಣಗಳಿಗೆ ಸೂಕ್ತ ಆಹಾರ, ನೀರು ಮತ್ತು ಆಶ್ರಯ ಸೌಲಭ್ಯ ಕಲ್ಪಿಸಬೇಕು.

೭. ಕಂಬಳ ಕ್ರೀಡೆ ನಡೆಯುವ ಸ್ಥಳದಲ್ಲಿ ಸ್ಥಳೀಯ ಪೊಲೀಸ್ ಇನ್‌ಸ್ಪೆಕ್ಟರ್ ಮತ್ತು ತಹಶೀಲ್ದಾರ್ ಹಾಜರಿರಬೇಕು.

೮. ಕಂಬಳ ಕ್ರೀಡೆಯನ್ನು ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಣ ಮಾಡಬೇಕು.

೯. ಕ್ರೀಡೆಯ ಸಂದರ್ಭದಲ್ಲಿ ಯಾರಾದರೂ ಕಾನೂನುಗಳನ್ನು ಉಲ್ಲಂಘಿಸಿದಲ್ಲಿ, ಅವರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು.

ಹೀಗೆ ಹೈಕೋರ್ಟ್ ಈ ಹಿಂದೆ ನೀಡಿದ್ದ ಸೂಚನೆಗಳನ್ನು ಕಂಬಳ ಆಯೋಜಕರು ಚಾಚೂ ತಪ್ಪದೆ ಪಾಲಿಸಿಕೊಂಡು ಕಂಬಳ ಕ್ರೀಡೆಯನ್ನು ಸಂಭ್ರಮದಿಂದ ನಡೆಸಿಕೊಂಡು ಬಂದಲ್ಲಿ ಕಂಬಳ ಕ್ರೀಡೆಗೆ ಯಾವುದೇ ಅಪಾಯದ ಭೀತಿಯಿಲ್ಲ.