ದೇವೆಗೌಡ್ರ ಆತ್ಮಕತೆಯಲ್ಲಿ ಅಂತಹದ್ದೇನಿದೆ? – ಅವರ್ಯಾಕೆ ಆತ್ಮಕತೆ ಬಿಡುಗಡೆ ಮುಂದೂಡ್ತಾ ಇದ್ದಾರೆ ಗೊತ್ತಾ?!

ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳೋಕೆ ಶತಾಯ-ಗತಾಯ ಸರ್ಕಸ್ ನಡೆಸಿರುವ ಮಾಜಿ ಪ್ರಧಾನಿ ದೇವೆಗೌಡರು, ಆತ್ಮಕತೆ ಬಿಡುಗಡೆಯನ್ನೇ ಮುಂದೂಡಿದ್ದಾರೆ ಅನ್ನೋ ಎಕ್ಸಕ್ಲೂಸಿವ್ ಮಾಹಿತಿ ಲಭ್ಯವಾಗಿದೆ. ಹೌದು ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರ್​ ಆತ್ಮಕತೆ ರಾಜ್ಯ ಹಾಗೂ ದೇಶದ ರಾಜಕಾರಣದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸುವಂತಿರೋದರಿಂದ ಆತ್ಮಕತೆ ಬಿಡುಗೆಯನ್ನೇ ಮುಂದೂಡುತ್ತಿದ್ದಾರೆ.


ದಶಕಗಳ ಕಾಲ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಕೃಷಿ ಮಾಡಿರುವ ದೇವೆಗೌಡರ್ ಆತ್ಮಕತೆಯಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಕುರಿತು ಸಾಕಷ್ಟು ಮಾಹಿತಿಗಳು ಇದೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೇ ಸಿದ್ಧರಾಮಯ್ಯನವರು ಹೇಗೆ ಜೆಡಿಎಸ್​​ಗೆ ಮೋಸ ಮಾಡಿದರೂ ಅನ್ನೋ ಮಾಹಿತಿಯನ್ನು ಈ ಆತ್ಮಕತೆ ಒಳಗೊಂಡಿದೆ ಎನ್ನಲಾಗುತ್ತಿದೆ.

ಕೇವಲ ಇಷ್ಟು ಮಾತ್ರವಲ್ಲದೇ, ಇಂದಿರಾಗಾಂಧಿ, ರಾಜೀವ್​ ಗಾಂಧಿ ಹಾಗೂ ಸೋನಿಯಾ ಗಾಂಧಿ ಬಗ್ಗೆಯೂ ಈ ಆತ್ಮಕತೆಯಲ್ಲಿ ಉಲ್ಲೇಖಿಸಲಾಗಿದೆ. ಗಾಂಧಿ ಮನೆತನದ ರಾಜಕಾರಣಿಗಳಿಂದ ದೇಶಕ್ಕೆ ಉಂಟಾದ ಲಾಭ-ನಷ್ಟಗಳನ್ನು ಈ ಪುಸ್ತಕ ದಾಖಲಿಸಿದೆ. ಹೀಗಾಗಿ ಈ ಪುಸ್ತಕ ಬಿಡುಗಡೆಯಿಂದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಮುಜುಗರ ಮತ್ತು ಬೇಸರ ಎರಡು ಉಂಟಾಗುವ ಸಾಧ್ಯತೆ ಇದೆ.


ಇದಲ್ಲದೇ ಈ ಪುಸ್ತಕ ಬಿಡುಗಡೆಯಿಂದ ಮೈತ್ರಿ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆಯಾಗುವ ಭೀತಿ ಇದೆ. ಹೀಗಾಗಿ ದೇವೆಗೌಡರು ತಮ್ಮ ಆತ್ಮಕತೆ ಬಿಡುಗಡೆಯನ್ನೇ ಮುಂದೂಡುತ್ತಿದ್ದಾರೆ. ಹೀಗಾಗಿ ಲೋಕಸಭಾ ಚುನಾವಣೆಯ ಬಳಿಕ ರಾಜಕೀಯ ಸ್ಥಿತಿ-ಗತಿಗಳನ್ನು ನೋಡಿಕೊಂಡು ಪುಸ್ತಕ ಬಿಡುಗಡೆ ಬಗ್ಗೆ ನಿರ್ಧಾರಕ್ಕೆ ಬರಲು ಗೌಡರು ತೀರ್ಮಾನಿಸಿದ್ದಾರೆ.


ದೇಶದಲ್ಲಿ ಇದುವರೆಗೂ ಸಾಕಷ್ಟು ರಾಜಕೀಯ ನಾಯಕರ ಆತ್ಮಕತೆಗಳು ಬಿಡುಗಡೆಯಾಗಿದ್ದು, ಹಲವು ವಿವಾದಗಳನ್ನು ಸೃಷ್ಟಿಸಿದೆ. ಇದೀಗ ಈ ಸಾಲಿಗೆ ದೇವೆಗೌಡರ ಆತ್ಮಕತೆಯೂ ಸೇರ್ಪಡೆಯಾಗಲಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ.