ಮತ್ತೆ ಸದ್ದುಮಾಡಿದ ಆಫರೇಶನ್​ ಕಮಲ! ಮಾಜಿ ಸಿಎಂ ಎಸ್​.ಎಂ.ಕೃಷ್ಣ ಭೇಟಿ ಮಾಡಿದ ಕಾಂಗ್ರೆಸ್​ ಶಾಸಕರು!!

ಲೋಕಸಭೆ ಹೀನಾಯ ಸೋಲಿನ ಬಳಿಕ ದೋಸ್ತಿ ನಾಯಕರು ಒಂದೆಡೆ ನಮ್ಮ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ ಎನ್ನುತ್ತಿರುವಾಗಲೇ, ಇತ್ತ ಮಹತ್ವದ ಬೆಳವಣಿಗೆಯೊಂದರಲ್ಲಿ ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ ಅಧಿಕೃತವಾಗಿ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್​ನ ಇನ್ನೊರ್ವ ಅತೃಪ್ತ ಶಾಸಕ ಡಾ.ಸುಧಾಕರ್ ಜೊತೆ ರಮೇಶ್ ಜಾರಕಿಹೊಳಿ ಮಾಜಿ ಸಿಎಂ ಎಸ್.ಎಂ.ಕೃಷ್ಣ ನಿವಾಸಕ್ಕೆ ಭೇಟಿ ನೀಡಿದ್ದಾರೆ.


ಸದಾಶಿವನಗರದಲ್ಲಿರುವ ಎಸ್.ಎಂ.ಕೆ ನಿವಾಸಕ್ಕೆ ನಿನ್ನಯಷ್ಟೇ ಮಾಜಿಡಿಸಿಎಂ ಆರ್.ಅಶೋಕ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ ಇಂದು ರಮೇಶ್ ಹಾಗೂ ಡಾ.ಸುಧಾಕರ್ ಭೇಟಿ ನೀಡಿರುವುದು ಬಿಜೆಪಿ ಅಧಿಕೃತವಾಗಿ ಆಫರೇಶನ್ ಕಮಲ ಆರಂಭಿಸಿದೆ ಎಂಬುದಕ್ಕೆ ಸಾಕ್ಷಿ ಒದಗಿಸಿದೆ.

ಕಳೆದ 2-3 ತಿಂಗಳಿನಿಂದ ಅತೃಪ್ತಿಯ ಹಾಡು ಹಾಡುತ್ತಿರುವ ರಮೇಶ್ ಜಾರಕಿಹೊಳಿ ಕೆಲದಿನಗಳಿಂದ ಮೌನವಾಗಿದ್ದರೂ ಲೋಕಸಭೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಆಕ್ಟಿವ್​ ಆಗಿ ಕಣಕ್ಕಿಳಿದಿದ್ದಾರೆ. ಇದೀಗ ಎಸ್​.ಎಂ.ಕೆ ಮೀಟ್​ ಮಾಡಿ ಮಾತುಕತೆ ನಡೆಸಿರೋದು ಹಲವು ಶಾಸಕರೊಂದಿಗೆ ರಮೇಶ್ ಬಿಜೆಪಿಗೆ ವಲಸೆ ಬರಲಿದ್ದಾರೆ ಎಂಬ ಮುನ್ಸೂಚನೆ ನೀಡುತ್ತಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.


ಇನ್ನು ಸಮ್ಮಿಶ್ರ ಸರ್ಕಾರ ರಚನೆ ಆದಾಗಿನಿಂದಲೂ ಸಿಎಂ ಕುಮಾರಸ್ವಾಮಿ ವಿರುದ್ಧ ಬಹಿರಂಗ ಅಸಮಧಾನ ತೋಡಿಕೊಳ್ಳುತ್ತಿದ್ದ ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್ ಕೂಡ ರಮೇಶ್ ಜಾರಕಿಹೊಳಿಯೊಂದಿಗೆ ಎಸ್​.ಎಂ.ಕೃಷ್ಣ ಭೇಟಿ ಮಾಡಿರುವುದು ಕಾಂಗ್ರೆಸ್​ನಲ್ಲಿ ಅತೃಪ್ತರ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಸಾಕ್ಷಿ ಒದಗಿಸುತ್ತಿದೆ. ಇಬ್ಬರು ಶಾಸಕರು ಮಾಜಿ ಸಿಎಂ ಜೊತೆ ಗಂಟೆಗೂ ಅಧಿಕ ಕಾಲ ಮಾತುಕತೆ ನಡೆಸಿದ್ದು, ರಾಜ್ಯದಲ್ಲಿ ರಾಜಕೀಯ ಸ್ಥಿತ್ಯಂತರ ನಡೆಯಲಿದೆ ಎನ್ನಲಾಗುತ್ತಿದೆ.