ಪಂಕ್ಚರ್​​​ ಕಟ್ಟುವ ದೇವೇಂದ್ರಪ್ಪನ ಮಗಳು ದ್ವಿತೀಯ PUCಯಲ್ಲಿ ರಾಜ್ಯಕ್ಕೆ ಫರ್ಸ್ಟ್​ ರ್ಯಾಂಕ್​​! ಸಾಧನೆಗೆ ಅಡ್ಡಿಯಾಗಲಿಲ್ಲ ಬಡತನ!!

ಬಡತನ ಸಾಧನೆಗೆ ಅಡ್ಡಿ ಅಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಹೌದು ಇಂದು ಪ್ರಕಟವಾದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕಲಾ ವಿಭಾಗದಲ್ಲಿ ಪಂಕ್ಚರ್​ ಕಟ್ಟುವ ಕಾರ್ಮಿಕನ ಮಗಳು ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದ್ದಾಳೆ. ಬಳ್ಳಾರಿಯ ಕೊಟ್ಟೂರಿನ ಕುಸುಮಾ ಫರ್ಸ್ಟ್​​ ರ್ಯಾಂಕ್​ ಗಳಿಸಿದ ಪ್ರತಿಭಾವಂತೆ.


ಬಳ್ಳಾರಿ ಜಿಲ್ಲೆ ಕೊಟ್ಟೂರಿನ ದೇವೆಂದ್ರಪ್ಪ ದಂಪತಿಗಳ ಐದನೇ ಪುತ್ರಿ ಕುಸುಮಾ ಕೊಟ್ಟೂರಿನ ಪಿ.ಯು ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಓದುತ್ತಿದ್ದು, ಶೃದ್ಧೆಯಿಂದ ಅಧ್ಯಯನ ಮಾಡಿ ಮೊದಲ ರ್ಯಾಂಕ್​ ಗಳಿಸಿದ್ದಾಳೆ. ಕೆಲವೇ ಗಂಟೆಗಳ ಹಿಂದೆ ಆಕೆ ಯಾರೆಂಬುದು ಯಾರಿಗೂ ತಿಳಿದಿರಲಿಲ್ಲ. ಆದರೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕುಸುಮಾ ಸಾಧನೆ ರಾಜ್ಯಕ್ಕೆ ಪರಿಚಯವಾಗಿದೆ.


ಕೊಟ್ಟೂರಿನ ವಾಲ್ಮೀಕಿ ನಗರದ 20 ಬೈ 20 ಅಳತೆಯ ಪುಟ್ಟ ಕಚ್ಚಾ ಮನೆಯಲ್ಲಿ ವಾಸವಾಗಿರುವ ಕುಸುಮ ಅವರ ತಂದೆಯ ವೃತ್ತಿ ಪಂಕ್ಚರ್ ಹಾಕುವುದು. ಹೀಗೆ ಪಂಕ್ಚರ್ ಹಾಕುವ ಕೆಲಸದಿಂದ ದಿನವೊಂದಕ್ಕೆ ಆಗುವ ಸಂಪಾದನೆ ಕೇವಲ 300 ರಿಂದ 350 ರೂಪಾಯಿ ಮಾತ್ರ. ಇಷ್ಟರಲ್ಲೇ ಏಳು ಜೀವಗಳ ಹೊಟ್ಟೆ ತುಂಬಿಸಿ ಮೇಲೆ ಇತರ ಖರ್ಚುಗಳನ್ನು ಮಾಡಬೇಕು. ಆದರೆ ಇದಾವುದೂ ಕುಸುಮಳ ಸಾಧನೆಗೆ ಅಡ್ಡಿಯಾಗಿಲ್ಲ ಪ್ರತಿದಿನ 10 ರಿಂದ ಹನ್ನೆರಡು ತಾಸು ನಿರಂತರ ಓದಿದ ಪರಿಣಾಮ ಇಂದು ಕಲಾ ವಿಭಾಗದಲ್ಲಿ 600 ಅಂಕಗಳಿಗೆ 594 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ರಾಂಕ್ ಬಂದಿದ್ದಾಳೆ.


ಕುಸುಮು ಕೇವಲ ಓದುವುದರಲ್ಲೇ ಕಾಲ ಕಳೆಯುತ್ತಿರಲಿಲ್ಲ. ತಂದೆಯ ಕೆಲಸದೊಂದಿಗೆ ಕೈ ಜೋಡಿಸುತ್ತಿದ್ದಳು. ರಜಾ ದಿನಗಳಲ್ಲಿ, ಖಾಲಿ ಸಮಯದಲ್ಲಿ ತಂದೆಯ ಪಂಕ್ಟರ್ ಶಾಪ್ನಲ್ಲಿ ಕೆಲಸ ಮಾಡಿದ್ದಾಳೆ. ತನ್ನ ಈ ಸಾಧನೆಗೆ ತನ್ನ ನಿರಂತರ ಶ್ರಮ ತಂದೆ ತಾಯಿ ಅಣ್ಣ ಅಕ್ಕಂದಿರರು ಮುಖ್ಯವಾಗಿ ತನಗೆ ಕಲಿಸಿದ ಗುರುವೃಂದದವರ ಶ್ರಮ ಕಾರಣ ಎನ್ನುತ್ತಾಳೆ ಕುಸುಮ.

ಇನ್ನು ಕುಸುಮಾ ತಂದೆ ವೃತ್ತಿಯಲ್ಲಿ ಪಂಕ್ಚರ್​​ ಹಾಕುವ ಕೆಲಸ ಮಾಡಿದರೂ ತನ್ನ ಐದೂ ಜನ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿದ್ದಾರೆ. ಹಿರಿಯ ಪುತ್ರಿ ಎಂಕಾಂ ಪದವೀಧರೆ ಅಲ್ಲದೆ ಉಪನ್ಯಾಸಕಿಯಾಗಿ ಕೆಲಸ ಆರಂಭಿಸಿದ್ದಾಳೆ. ಇನ್ನುಳಿದ ಇಬ್ಬರ ಪೈಕಿ ಓರ್ವ ಪುತ್ರಿ ಬಿಎಡ್ ಓದುತ್ತಿದ್ದು ಮತ್ತೊಬ್ಬಳು ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಾಳೆ.ಈವರೆಗೆ ಸಾಕಷ್ಟು ಶ್ರಮಪಟ್ಟು ಮಕ್ಕಳಿಗೆ ಓದಿಸಿದ್ದೇನೆ, ನನಗೆ ನನ್ನ ಬಡತನವೇ ದೊಡ್ಡ ಶತ್ರು, ಯಾರಾದರೂ ನನಗೆ ಸಹಾಯ ಮಾಡಿದರೆ ನಾನು ನನ್ನ ಕೊನೆಯ ಮಗಳಿಗೆ ಅವಳು ಇಷ್ಟಪಡುವ ಕೋರ್ಸ್ಗೆ ಸೇರಿಸಿ ಅವಳು ಮತ್ತಷ್ಟು ಸಾಧನೆ ಮಾಡಲು ಸಹಾಯ ಆಗಬಹುದು ಎನ್ನುತ್ತಾರೆ ದೇವೆಂದ್ರಪ್ಪ. ಇನ್ನಾದರೂ ಈ ಬಡ ತಂದೆಯ ಕಷ್ಟಕ್ಕೆ ಉಳ್ಳವರು ಸ್ಪಂದಿಸಬೇಕಿದೆ.