ಲಂಕೇಶ್ ಪ್ರೀತಿಯ ಬಾಲಣ್ಣನ ಮುತ್ತಿನ ಕಥೆ!!

468

ಪ್ರಿಯ ಓದುಗರೆ,

ಸದಾಶಿವ ಶಣೈ ಒಬ್ಬರು ಹಿರಿಯ ಸಿನೆಮಾ ವರದಿಗಾರರಲ್ಲೊಬ್ಬರು. ಅವರು ಸುಮಾರು 3 ದಶಕಗಳ ಕಾಲ ಸಿನೆಮಾ ಪತ್ರಿಕೋದ್ಯಮದಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ. ಪದ್ಮಭೂಷಣ ಡಾ.ರಾಜಕುಮಾರರಿಂದ ಹಿಡಿದು ಇತ್ತೀಚಿನ ನಟ ನಟಿಯರವರೆಗೆ ಇವರು ಉತ್ತಮ ಒಡನಾಟ ಇಟ್ಟುಕೊಂಡವರು. ಇವರು ತಮ್ಮ ಅನುಭವಗಳನ್ನು ತಮ್ಮ ಮುಂದೆ ಇಡುತ್ತಿದ್ದಾರೆ.. ನೀವೇ ಓದಿ.

ad

ಲಂಕೇಶ್ ಪ್ರೀತಿಯ ಬಾಲಣ್ಣನ ಮುತ್ತಿನ ಕಥೆ

`ನಾನು  ಅತ್ಯಂತ ಇಷ್ಟ ಪಡುವ ಎರಡು ಮಹಾನ್ ವ್ಯಕ್ತಿಗಳ ವ್ಯಕ್ತಿತ್ವದ ಒಂದು ಝಲಕನ್ನು ಇಲ್ಲಿ ನಿಮ್ಮ ಮುಂದೆ  ಇಡುತ್ತಿದ್ದೇನೆ. ಪ್ಲೀಸ್ ಓದಿ. ನಿಮಗೂ ಅವರು ಇಷ್ಟವಾಗುವ ಸಾದ್ಯತೆ ಇದೆ. ಆ ವ್ಯಕ್ತಿಗಳು ಇನ್ಯಾರೂ ಅಲ್ಲ. ಒಬ್ಬರು ಕನ್ನಡ ಸಾಹಿತ್ಯ ಲೋಕ ಕಂಡ ದೊಡ್ಡ ಸಾಹಿತಿ ಲಂಕೇಶ್, ಮತ್ತೊಬ್ಬರು ಕನ್ನಡ ಚಿತ್ರರಂಗ ಕಂಡ ಅಪ್ರತಿಮ  ನಟ ಬಾಲಣ್ಣ.

‘ಆ’ ಮನುಷ್ಯನಿಗೆ ಬಾಯಿಗೆ ಬಂದ ಹಾಗೆ. ಪ್ರಶ್ನೆ  ಕೇಳಬಾರದು.  ಅವರ ಮನಸ್ಸಿಗೆ ನೋವುಂಟು ಮಾಡ್ಬೇಡ.  ಹೀಗೆಂದು ಒಂದು ದಿನ ನಾನು ಬಾಲಣ್ಣ ಅವರ ಸಂದರ್ಶನ ಮಾಡಲು ಹೊರಟಾಗ ಲಂಕೇಶರು ನನಗೆ ಹಿತ ನುಡಿ ಹೇಳಿದರು. ಪತ್ರಿಕೆ ಅಂಚೆಯಲ್ಲಿ ಸರಿಯಾಗಿ ತಲುಪುತ್ತದೆಯೇ? ಎಂದು ಕೂಡ ವಿಚಾರಿಸಬೇಕೆಂದು ಹೇಳಿದ್ದರು.

ಅಷ್ಟಕ್ಕೇ ಮಾತು ನಿಲ್ಲಿಸದ ಅವರು, ಹಾಗೆಯೇ ಅವರಿಗೆ ಆರ್ಥಿಕವಾಗಿ ಎನಾದರು ತೊಂದರೆ ಇದೆಯಾ ಎಂದು ಸೂಕ್ಷ್ಮವಾಗಿ ಗಮನಿಸಿಕೊಂಡು ಬರಬೇಕು ಎಂದು ಹೇಳಿದರು.

ನಾನು ಯಾವತ್ತೂ ಯಾರ ಸಂದರ್ಶನ ಮಾಡಲು ಹೊರಟಾಗಲು ಈ ರೀತಿಯ ಯಾವುದೇ ಹಿತನುಡಿಯನ್ನು ಹೇಳದ ಮೇಷ್ಟ್ರು ಇದೇ ಮೊತ್ತ ಮೊದಲ ಬಾರಿಗೆ ನನಗೆ ಈ ರೀತಿ ಸಲಹೆ ನೀಡಿದ್ದು ನೋಡಿ ಆಶ್ವರ್ಯವಾಯ್ತು.

ನಮ್ಮ ಬಾಲಣ್ಣರನ್ನು ಕಂಡರೆ ಲಂಕೇಶ್ ಅವರಿಗೆ ಏನೋ ಪ್ರೀತಿ ಮತ್ತು ಆಭಿಮಾನ. ಕಿವಿ ಕೇಳಿಸದಿದ್ದರೂ ಎದುರಿಗಿದ್ದ ನಟನ ತುಟಿ ಚಲನೆ ಗಮನಿಸಿ ಡೈಲಾಗ್ ಹೇಳುತ್ತಾ ನಟನೆ ಮಾಡುವ ಅವರ ಪ್ರತಿಭೆಯನ್ನು ಲಂಕೇಶರು ಅದೆಷ್ಟೋ ಬಾರಿ ನಮ್ಮ ಆಫೀಸ್ ಮೀಟಿಂಗ್ ನಲ್ಲಿ  ಹೊಗಳಿದ್ದುಂಟು. ಸಾಧಾರಣವಾಗಿ ಸಿನಿಮಾ ನಟರ ಬಗ್ಗೆ ಅಷ್ಟೊಂದು ಮಾತನಾಡದ ಲಂಕೇಶರು, ಬಾಲಣ್ಣನ ವಿಷಯದಲ್ಲಿ ಮಾತ್ರ ಅಪ್ಪಟ ಅಭಿಮಾನಿಯಂತೆ ಮಾತನಾಡುತ್ತಿದ್ದರು.

ಮತ್ತೊಂದು ಕಡೆ ಬಾಲಣ್ಣ ಕೂಡಾ ಲಂಕೇಶ್ ಪತ್ರಿಕೆಯ ಕಟ್ಟಾ ಅಭಿಮಾನಿಯೂ ಆಗಿದ್ರು. ಪ್ರತೀ ಮಂಗಳವಾರ ಲಂಕೇಶ್ ಪತ್ರಿಕೆಯನ್ನು ಖರೀದಿಸುವ ಏಕೈಕ ಉದ್ದೇಶದಿಂದ ಆ ಇಳಿ ವಯಸ್ಸಿನಲ್ಲೂ, ಕಣ್ಣು ಕಾಣಿಸದಿದ್ದರೂ, ಆಟೋದಲ್ಲಿ ಕೆಂಗೇರಿಯಿಂದ ಆನಂದರಾವ್ ಸರ್ಕಲ್​ಗೆ ಬಂದು ಅಲ್ಲಿ ಪತ್ರಿಕೆ ಖರೀದಿಸಿ, ಮತ್ತೆ ಅದೇ ಆಟೋ ಏರಿ ಕೆಂಗೇರಿಗೆ ವಾಪಾಸಾಗುತ್ತಿದ್ದುರು. ಅದು ಪ್ರತಿ ಮಂಗಳವಾರದ ಅವರ ದಿನಚರಿಯಾಗಿರುತ್ತಿತ್ತು.

ಬಾಲಣ್ಣ ಪ್ರತಿವಾರ ಹೀಗೆ ಬಂದು ಹೋಗುವುದನ್ನು ಗಮನಿಸಿದ ವ್ಯಕ್ತಿಯೋಬ್ಬ ಲಂಕೇಶರಿಗೆ ಒಮ್ಮೆ ಪತ್ರ ಬರೆದ. ಪ್ರೀತಿಯ ಸಂಪಾದಕರಿಗೆ, ನಮಸ್ಕಾರ. “ನಿಮ್ಮ 12 ರೂಪಾಯಿ ಪತ್ರಿಕೆಯನ್ನು ಖರಿದೀಸಲು ಪ್ರತಿವಾರ ಆ ಹಿರಿಯ ಕಲಾವಿದ  ಆಟೋಗಾಗಿ 200 ರೂಪಾಯಿ ಖರ್ಚು​  ಮಾಡುತ್ತಿದ್ದಾರೆ. ಅನಾರೋಗ್ಯ ನಿರುದ್ಯೋಗ ಮತ್ತು ಸಾಲ ಮೊದಲಾದ ಅಸಹಾಯಕತೆಯ ನಡುವೆಯೂ ಪತ್ರಿಕೆಗಾಗಿ ಅವರು 200 ರೂಪಾಯಿ ಖರ್ಚು ಮಾಡುತ್ತಿದ್ದಾರೆ. ನೀವು ಯಾರಿಗೂ ಪತ್ರಿಕೆ ಬಿಟ್ಟಿ ಕೊಡುವುದಿಲ್ಲ ಎಂಬುದು ನಾನು ಓದಿದ್ದೇನೆ. ಅದು ನಿಮ್ಮ ಸಿದ್ಧಾಂತವಿರಬಹುದು. ಆದರೂ  ಆ ಮಹಾನ್ ಕಲಾವಿದನಿಗೆ ನೀವ್ಯಾಕೆ ಅಂಚೆಯಲ್ಲಿ ಪತ್ರಿಕೆ ಕಳಿಸಬಾರದು? ಎಂದು ಲಂಕೇಶರಿಗೆ ಒಬ್ಬ ಓದುಗ  ಪತ್ರ ಬರೆದಿದ್ದ.

ಯಾರೋ ಒಬ್ಬ ಅಪರಿಚಿತ ಓದುಗ ಬರೆದ ಪತ್ರವನ್ನು ಓದಿದ ನಂತರ, ಲಂಕೇಶರು  ಬಾಲಣ್ಣರಿಗೆ ಅಂಚೆಯಲ್ಲಿ ಪತ್ರಿಕೆ ಕಳುಹಿಸುವ ವ್ಯವಸ್ಥೆ ಮಾಡಿದ್ದರು. ಇದಾಗಿ ಸುಮಾರು ನಾಲ್ಕು  ವರುಷ ಕಳೆದು ಹೋಗಿದ್ದವು.

ಇದೇ ವಿಷಯವನ್ನು ನಾನು ಸಂದರ್ಶನ ಮಾಡಲು ಹೊರಟಾಗ ಲಂಕೇಶರು ನೆನಪಿಸಿಕೊಳ್ಳುತ್ತಾ ಪತ್ರಿಕೆ ಸರಿಯಾದ ಸಮಯಕ್ಕೆ ತಲುಪುತ್ತದೆಯೇ? ಎಂದು ವಿಚಾರಿಸಬೇಕೆಂದು ನೆನಪಿಸಿದ್ದು.

ಕೆಂಗೇರಿಯಲ್ಲಿರುವ ಅವರ ಹರಕು ಮುರುಕು ಮನೆಯನ್ನು ನಾನು ಅಂದು ಪ್ರವೇಶಿಸಿದ್ದೆ ತಡ,  ಹಾಗೇ ಒಳಗಿನಿಂದ ಬಂದವರೇ, ನನ್ನನ್ನು ಅವರೆಡಗೆ ಬರಸೆಳೆದು ಅಪ್ಪಿಕೊಂಡು, ತಬ್ಬಿಕೊಂಡು ಕೆನ್ನೆಗೆ ಲೊಚ ಲೊಚನೆ ಒಂದೆರೆಡು ಮುತ್ತುಗಳ  ಸುರಿಮಳೆಗೈದರು. ನಾನು ದೊಡ್ಡವನಾದ ಮೇಲೆ ಗಂಡಸರೊಬ್ಬರು ಈ ರೀತಿ ಮುತ್ತು ಕೊಡುತ್ತಿದ್ದುದು ಅಂದರೆ ಬಾಲಣ್ಣ ಮಾತ್ರ. ನನ್ನ ಹಾಗೆ ಇವರ ಮುತ್ತನ್ನು ಆಗಾಗ ಪಡೆಯುತ್ತಿದ್ದ ಮತ್ತೊಬ್ಬ ಸಿನಿಮಾ ಪತ್ರಕರ್ತರೆಂದರೆ ಬೆಲಗೂರು ಸಮೀವುಲ್ಲಾ. ನಿಜ ಹೇಳ್ತಿನಿ, ಬಾಲಣ್ಣನ ಆ ಮುತ್ತಿನ ಹಿಂದಿನ ಪ್ರೀತಿ, ವಿಶ್ವಾಸ ಇದೆಯಲ್ಲಾ? ಅದನ್ನು ವರ್ಣಿಸಲು ಸಾದ್ಯವೇ ಇಲ್ಲ.  ಅಂತಹ ಪ್ರೀತಿಯ ಮತ್ತೊಂದು  ಮುತ್ತು ನನಗೆ ಈ ದಿನದ ತನಕ ಸಿಕ್ಕೇ ಇಲ್ಲ ಎಂದು ಹೇಳಬಹುದು.

ಅವರ ಆಲಿಂಗನ ಮತ್ತು ಮುತ್ತಿನ ಸವಿ ಸವೆದ ನಂತರ, ಅವರ ಮನೆಯಲ್ಲಿ ಉಪ್ಪಿಟ್ಟು ಮತ್ತು ಕಾಫಿಯ ಸೇವೆಯೂ ನಡೆಯಿತು. ಆ ನಂತರ ನನ್ನ ಮತ್ತು ಅವರ ನಡುವೆ ಸಂದರ್ಶನದ ನೆಪದಲ್ಲಿ ಸುದೀರ್ಘವಾದ ಹರಟೆ ಮತ್ತು ಮಾತುಗಳು ವಿನಿಮಯವಾದವು. ಅಂದು ಏನೇನು ಮಾತನಾಡಿದೇನು ಅದು ನನಗೆ ಈಗ ನೆನಪಾಗುತ್ತಿಲ್ಲ. ಮತ್ತು ಅದು ಇಲ್ಲಿ ಮುಖ್ಯವೂ ಅಲ್ಲ ಎಂಬದು ನನ್ನ ಭಾವನೆ. ಆ ಸಂದರ್ಶನಕ್ಕಿಂತಲೂ ಮುಖ್ಯವಾದ ಘಟನೆಯೊಂದು ಅಂದು ನಡೆದು ಹೋಯಿತು.

ನಿಮಗೆ ಪತ್ರಿಕೆ ಸರಿಯಾದ ಸಮಯದಲ್ಲಿ  ತಲುಪುತ್ತಿದೆಯಾ? ಎಂದು ನಾನು ಸಹಜವಾಗಿ ಬಾಲಣ್ಣ ಅವರನ್ನು ಕೇಳಿದೆ.

ಈ ಪ್ರಶ್ನೆ ಕೇಳಿದ ತಕ್ಷಣ ಒಂದೇ ನಿಮಿಷ ಬರುತ್ತೇನೆ ಎಂದು ಹೇಳಿ ಬಾಲಣ್ಣ ಮನೆಯ ಒಳಗಡೆ ಹೋದರು. ಹಾಗೇ ಹೋದವರೇ ಹೊರಗೆ ಬಂದಾಗ ಕೈಯಲ್ಲಿ ಧೂಳು ಹಿಡಿದ ದೊಡ್ಡದೊಂದು ಕಾಗದದ  ಬಂಡಲ್​ ಒಂದನ್ನು ತಂದು ನನ್ನ ಮುಂದೆ ಇಟ್ರು. ಹಾಗೆ ಹಾಕಿದಾಗ ಆ ಬಂಡಲ್ ಗೆ ಅಂಟಿಕೊಂಡಿದ್ದ ಧೂಳೆಲ್ಲ  ಗಾಳಿಯಲ್ಲಿ ಹಾರಿತು. ಆನಂತರ ಅವರೇ ಅಲ್ಲಿದ್ದ ಬಟ್ಟೆಯಿಂದ ಅದರ ಧೂಳು ಹೊಡೆದರು. ಅದು ಕಳೆದ ನಾಲ್ಕು ವರ್ಷಗಳಿಂದ ನಮ್ಮ ಕಚೇರಿಯಿಂದ ಕಳುಹಿಸುತ್ತಿದ್ದ ಲಂಕೇಶ್ ಪತ್ರಿಕೆಯಾಗಿತ್ತು. ಅಂಚೆಯಲ್ಲಿ ಬರುತ್ತಿದ್ದ ಪತ್ರಿಕೆಯನ್ನು ಅವರು ಎಂದೂ ಬಿಚ್ಚಿ ನೋಡಿದವರೇ ಅಲ್ಲ. ಆ ಎಲ್ಲಾ ಪತ್ರಿಕೆಯ ಅಂಚೆ ಕಚೇರಿಯ ಸೀಲುಗಳು  ಕೂಡ ಅವರು ಓಪನ್  ಮಾಡಿರಲಿಲ್ಲ.

. “ ಏನ್ ಸಾರ್ ಇದು? ಂಯಾಕೆ ಸರ್ ಹೀಗಾಯ್ತು?” ಎಂದು ನಾನು ಮೆಲುದ್ವನಿಯಲ್ಲಿ ಪ್ರಶ್ನಿಸಿದೆ.  ಅದಕ್ಕೆ ಅವರು ಕೊಟ್ಟ ಉತ್ತರ ನಿಜವಾಗಿಯೂ ಅವರ ಬಗೆಗಿನ ಗೌರವವನ್ನು ದುಪ್ಪಟ್ಟು ಮಾಡಿತು.

“ ನೋಡಪ್ಪ ಶೆಣೈ, ಈ ಪತ್ರಿಕೆ ಅಂಚೆಯಲ್ಲಿ ನನಗೆ ಗುರುವಾರ ಬಂದು ತಲುಪುತ್ತೆ. ನನಗೆ ಮಂಗಳವಾರ ಮಧ್ಯಾಹ್ನ ಲಂಕೇಶ್ ಪತ್ರಿಕೆ ಓದದಿದ್ರೆ ನಿದ್ದೆ ಬರೋದಿಲ್ಲ. ಲಂಕೇಶ್ ಪತ್ರಿಕೆ ನನ್ನ ಪಾಲಿನ ಬೈಬಲ್ಇದ್ದ ಹಾಗೆ. ಹೀಗಾಗಿ ಅವರು ಅಂಚೆಯಲ್ಲಿ ಕಳುಹಿಸಿದ್ರೂ ಕೂಡ ನಾನು ಮಂಗಳವಾರ ಪತ್ರಿಕೆ ಖರೀದಿಸಿ ಓದುತ್ತಿದ್ದೇನೆ. ನಾನು ಪತ್ರಿಕೆ ಓದಿದ 48 ಗಂಟೆಗಳ ನಂತರ ನನಗೆ ಇದು ಅಂಚೆಯಲ್ಲಿ ಬರುತ್ತಿದೆ. ದಯವಿಟ್ಟು ಇದನ್ನು ಅಂಚೆಯಲ್ಲಿ ಕಳುಹಿಸಬೇಡಿ ಎಂದು ಲಂಕೇಶ್ ಅವರಿಗೆ ಹೇಳಿ ” ಎಂದು ವಿನಮ್ರವಾಗಿ ಹೇಳಿಕೊಂಡರು.

. ಅಂಚೆಯಲ್ಲಿ ಬಂದ ಪತ್ರಿಕೆಯನ್ನು ಬಿಡಿಸಲು ಹೋಗದೆ ನಾಲ್ಕು ವರ್ಷಗಳಿಂದ ಗಂಟು ಕಟ್ಟಿ ಇಟ್ಟಿದ್ದ ಬಾಲಣ್ಣ ವರ್ತನೆ ನನಗೆ ಆಶ್ಛರ್ಯ ಹುಟ್ಟಿಸಿದ್ದು ಮಾತ್ರವಲ್ಲ, ಅವರು ಆ ಕ್ಷಣದಲ್ಲಿ ನನಗೆ ಆದರ್ಶಪ್ರಾಯವಾಗಿ ಕಾಣಿಸಿದರು.  ಇಂತಹ ಸಂದರ್ಭದಲ್ಲಿ ಇನ್ನು ಅವರಿಗೆ ಹಣಕಾಸಿನ ಅಗತ್ಯ ಇದೆಯೋ ಎಂದು ಕೇಳುವ ಧೈರ್ಯ ನನಗೆ ಬರಲೇ ಇಲ್ಲ.  . ಅವರಿಗೆ ಶುಭಕೋರಿ ಅವರ ಕಾಲಿಗೆ ನಮಸ್ಕರಿಸಿ ಕಚೇರಿಗೆ ವಾಪಾಸಾದೆ.

ಏ ಅವರಿಗೆ ಪತ್ರಿಕೆ ಕಳಿಸಿ ಅವರ ಸ್ವಾಭಿಮಾನಕ್ಕೆ ಧಕ್ಕೆ ತರಬೇಡಿ ಇಂದೇ ಪತ್ರಿಕೆ ನಿಲ್ಲಿಸಿ. ಇಂತಹ ಹುಚ್ಚು ಅಭಿಮಾನಿಗಳಿಗೆ ನಾವು ಏನು ಮಾಡೋಕ್ಕೆ ಆಗುತ್ತೆ. ಅಲ್ಲಾ ಒಂದೆಡೆ ಅಭಿಮಾನ್  ಸ್ಟುಡಿಯೋಗಾಗಿ ಸಾಲ ಮಾಡಿದ್ದಾರೆ. ಮತ್ತೊಂದೆಡೆ
ಆರೋಗ್ಯ ಅವರಿಗೆ ಕೈ ಕೊಟ್ಟಿದೆ. ಇಂತಹ ಪರಿಸ್ಧಿತಿಯಲ್ಲೂ, 12 ರೂಪಾಯಿ ಪತ್ರಿಕೆಗೆ 200 ರೂಪಾಯಿ ಖರ್ಚು​ ಮಾಡುತ್ತಾರೆ, 20 ಕಿಲೋಮೀಟರ್ ದೂರ ಬಂದು ಪತ್ರಿಕೆ ಯನ್ನು ಖರೀದಿಸಲು ಕಾಯ್ತಾ  ಇರ್ತಾರೆ ಅಂದ್ರೆ ಆ ಮನುಷ್ಯನ ಬಗ್ಗೆ ನಾನು ಹೇಳಲು ಸಾದ್ಯ? foolish fellow, poor fellow ಎಂದು ಗೊಣಗಿ ಮೌನಕ್ಕೆ ಶರಣಾಗಿ ಲಂಕೇಶ್ ಚಿಂತಿಸುತ್ತಾ ಕುಳಿತರು. ಈ ಘಟನೆ ಆದ ಕೆಲವೇ ದಿನಗಳಲ್ಲಿ , ಮೇಷ್ಟ್ರಿಗೂ ನನಗೂ ಬಾಲಣ್ಣ ಥ್ಯಾಂಕ್ಸ್ ಎಂದು ನಾಲ್ಕೇ ವಾಕ್ಯದ ಪತ್ರವನ್ನೂ ಬರೆದು ಕಳಿಸಿ ತನ್ನ ವ್ಯಕ್ತಿತ್ವವನ್ನು ಪ್ರದರ್ಶಿಸಿದ್ದರು..

ಸಾಹಿತಿ ಲಂಕೇಶ್ ಅವರ ಕಲಾಭಿಮಾನ ಮತ್ತು ಕಲಾವಿದ  ಬಾಲಣ್ಣ ಅವರ ಸಾಹಿತ್ಯದ ಮೇಲಿನ ಅಭಿಮಾನ , ಇವರಿಬ್ಬರು ಪರಸ್ಪರ ಒಬ್ಬರನೊಬ್ಬರು ಗೌರವಿಸುವ  ಜುಗಲ್ ಬಂದಿ  ಇಂದಿಗೂ ನೆನೆದುಕೊಂಡಾಗ ನನಗೆ ಮೈ ರೋಮಾಂಚನವಾಗುತ್ತದೆ. ಇಂದು ಅವರಿಬ್ಬರು ನಮ್ಮ ನಡುವೆ ಇಲ್ಲವಾದರೂ , ಅವರು ಬಿಟ್ಟು ಹೋದ ಆದರ್ಶಗಳೇ ನನಗೆ ಆಗಾಗ್ಗೇ  ಸ್ಪೂರ್ತಿ ನೀಡುತ್ತದೆ.  ನಿಮಗೆ ಈ ಕಾಲದಲ್ಲಿ ಇಂತಹ ಕಲಾವಿದರಾಗಲಿ, ಸಾಹಿತಿಗಳಾಗಲಿ ನೋಡಲು ಸಿಗುತ್ತಾರಾ ?…… ಒಮ್ಮೆ ನಿಮ್ಮ ಸುತ್ತಮುತ್ತ ಕಣ್ಣಾಡಿಸಿ.

ಲೇಖಕರು:

ಸದಾಶಿವ ಶೆಣೈ.

 

 

Sponsored :

Related Articles