ಮೋದಿ ಗೆಲುವಿನ ಸಂಭ್ರಮಾಚರಣೆಗೆ ಫಲಿತಾಂಶಕ್ಕೂ ಮುನ್ನವೇ ಯಕ್ಷಗಾನ ಸೇವೆಗೆ ಬುಕ್ಕಿಂಗ್​​!

530

ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಲು ಇನ್ನು ಒಂದೇ ದಿನ ಬಾಕಿ. ಆದ್ರೆ ದೇಶದಲ್ಲಿ ಮೋದಿ ಮತ್ತೆ ಪ್ರಧಾನಿಯಾಗುತ್ತಾರೆಂಬ ವಿಶ್ವಾಸದಲ್ಲಿ ಫಲಿತಾಂಶ ಪ್ರಕಟವಾಗುವ ಮುನ್ನವೇ ವಿಜಯ ಸಂಕಲ್ಪ ಈಡೇರಿದ ಸಂಭ್ರಮಾಚರಣೆಗೆ ಯಕ್ಷಗಾನ ಬುಕ್ಕಿಂಗ್‌ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ad

ದೇಶಾದ್ಯಂತ ಎಲ್ಲಾ ಹಂತದ ಲೋಕಸಭಾ ಚುನಾವಣೆ ಮುಗಿದಿದ್ದು, ದೇಶದ ಜನತೆ ಚುನಾವಣಾ ಫಲಿತಾಂಶಕ್ಕೆ ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಆದರೆ ಈತನ್ಮಧ್ಯೆ ಮಂಗಳೂರಿನಲ್ಲಿ ‘ನಮೋ ಎಗೈನ್‌, ನಮೋ ಫಿರ್‌ಸೇ, ಟೀಮ್‌ಮೋದಿ, ನಮೋ ಮಿಷನ್‌400 ಪ್ಲಸ್‌’ ಟೀಮ್‌ ದೇಶಾದ್ಯಂತ ಬಿಜೆಪಿ ಜಯಭೇರಿ ಬಾರಿಸಿ ಬಹುಮತದೊಂದಿಗೆ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುತ್ತಾರೆಂಬ ವಿಶ್ವಾಸದಲ್ಲಿ ವಿಜಯ ಸಂಕಲ್ಪ ಯಕ್ಷಗಾನ ಬುಕ್ಕಿಂಗ್‌ ಮಾಡಿದೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ಮೇಳದಿಂದ ಮೇ 24ರ ಶುಕ್ರವಾರ ರಾತ್ರಿ 8.30ರಿಂದ ಮಂಗಳೂರಿನ ರಥಬೀದಿಯಲ್ಲಿ ಶ್ರೀ ದೇವಿ ಮಹಾತ್ಮ್ಯಂ ಎಂಬ ಪುಣ್ಯ ಕಥಾ ಪ್ರಸಂಗ ನಡೆಯಲಿದೆ.

ಚೌಕಿ ಪೂಜೆಯ ಬಳಿಕ ಅನ್ನಪ್ರಸಾದವೂ ನಡೆಯಲಿದೆ ಎಂದು ಆಮಂತ್ರಣ ಮುದ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ. ಇನ್ನು ದೇಶದಲ್ಲಿ ಬಿಜೆಪಿ ಅಲೆಯಿರುವುದು ಸ್ಪಷ್ಟವಾಗಿದೆ. ದೇಶದಲ್ಲಿ ಬಿಜೆಪಿ ಜಯಭೇರಿ ಬಾರಿಸಿ ಮೋದಿ ಪ್ರಧಾನಿಯಾಗಬೇಕೆಂಬ ಅಭಿಲಾಷೆಯಿಂದ ಕಟೀಲು ದೇವಿಗೆ ಯಕ್ಷಗಾನ ಹರಕೆ ಹೇಳಿದ್ದೇವೆ. ಕಟೀಲು ಮಾತೆಯ ಅನುಗ್ರಹದಿಂದ ಮೋದೀಜಿ ಮತ್ತೆ ಪ್ರಧಾನಿಯಾಗುವ ಎಲ್ಲ ವಿಶ್ವಾಸ ವ್ಯಕ್ತವಾಗಿದೆ. ಅದಕ್ಕಾಗಿ ಈ ವರ್ಷವೇ ಯಕ್ಷಗಾನ ನಡೆಸುವ ಉದ್ದೇಶದಿಂದ ಫಲಿತಾಂಶದ ಮರುದಿನವೇ ಯಕ್ಷಗಾನ
ನಡೆಸುವ ಉದ್ದೇಶದಿಂದ ಮುಂಚಿತವಾಗಿಯೇ ಯಕ್ಷಗಾನ ಬುಕ್ಕಿಂಗ್‌ ಮಾಡಲಾಗಿದೆ ಅಂತ ಹೇಳ್ತಾರೆ ನಮೋ ಎಗೈನ್‌ ತಂಡದವರು.

ಇನ್ನು ಮೋದಿ ಮತ್ತೆ ಪ್ರಧಾನಿಯಾಗಬೇಕೆಂಬ ಸಂಕಲ್ಪದಿಂದ ಟೀಂ ಮೋದಿ ತಂಡ ಕಟೀಲು ಮೇಳದವರಿಂದ 2018 ಡಿ.29ರಂದು ದೇವಿ ಮಹಾತ್ಮ್ಯಂ ಯಕ್ಷಗಾನ ಆಯೋಜಿಸಿತ್ತು. ಇದೀಗ ಫಲಿತಾಂಶ ಪ್ರಕಟವಾಗುವ ಮುನ್ನವೇ ವಿಜಯ ಸಂಕಲ್ಪ ಈಡೇರಿದ ಸಂಭ್ರಮಾಚರಣೆಗೆ ಯಕ್ಷಗಾನ ಬುಕ್ಕಿಂಗ್‌ ಮಾಡಿದ್ದಾರೆ..

ಮೇ 25 ಮೇಳ ತಿರುಗಾಟ ಕೊನೆ

ಕಟೀಲು ಶ್ರೀ ದುರ್ಗಾಪರಮೇಶ್ವರಿ ಮೇಳದಿಂದ ಡಿ.2ರಂದು ಶ್ರೀ ಕ್ಷೇತ್ರದ ಸನ್ನಿಧಿಯಲ್ಲಿ ಗೆಜ್ಜೆಮುಹೂರ್ತ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆದು ಆರು ಮೇಳಗಳ ದೇವರ ಚೌಕಿ ಪೂಜೆ ನಡೆದಿತ್ತು. ಡಿ.3ರಂದು ಮೇಳಗಳ ತಿರುಗಾಟ ಆರಂಭವಾಗಿದ್ದು, ಈ ತಿರುಗಾಟ ಮೇ 25ರಂದು ಕೊನೆಗೊಳ್ಳಲಿದೆ. ದೇಶದಲ್ಲಿ ಬಿಜೆಪಿ ವಿಜಯೋತ್ಸವ ಗಳಿಸಲಿದ್ದು, ದೇವಿಯ ಹರಕೆ ಸೇವೆ ನಡೆಸಬೇಕಾದರೆ ಮತ್ತೆ 7 ತಿಂಗಳು ಕಾಯಬೇಕು. ಅದಕ್ಕಾಗಿ ಯಕ್ಷಗಾನ ಕೊನೆಗೊಳ್ಳುವ ಒಂದು ದಿನ ಮುಂಚಿತವಾಗಿ ಯಕ್ಷಗಾನ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Sponsored :

Related Articles