ಮಾಜಿ ಸಚಿವ ಡಿಕೆಶಿಗೆ ಸಿಗದ ಜಾಮೀನು: ಸೆ.17ರವರೆಗೆ ಮತ್ತೆ ಇಡಿ ಕಸ್ಟಡಿಗೆ

295

ನವದೆಹಲಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ರೋಸ್ ಕೋರ್ಟ್ ನ್ಯಾಯಾಲಯ ಸೆ.17ರ ವರೆಗೂ ಇಡಿ ಕಸ್ಟಡಿಗೆ ಒಪ್ಪಿಸಿದೆ.

ad

ಅನಾರೋಗ್ಯದಿಂದ ಬಳಲುತ್ತಿರುವ ಡಿಕೆಶಿಯವರಿಗೆ ಮೊದಲು ಚಿಕಿತ್ಸೆ ನೀಡಿ ಆಮೇಲೆ ವಿಚಾರಣೆ ನಡೆಸಿ ಎಂದು ತನಿಖಾಧಿಕಾರಿಗಳಿಗೆ ನ್ಯಾಯಾಧೀಶರು ಸೂಚಿಸಿದ್ದಾರೆ. ಸೆ.17 ರಂದು ವಿಚಾರಣೆ ಕೈಗೆತ್ತಿಕೊಳ್ಳಲಿದ್ದು, ಸೋಮವಾರದೊಳಗೆ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಲು ಜಾರಿ ನಿರ್ದೇಶನಾಲಯಕ್ಕೆ ಸೂಚನೆ ನೀಡಿದೆ.

ಇಡಿ ಪರ ವಾದ ಮಂಡಿಸಿದ ಸಾಲಿಟರ್ ಜನರಲ್ ಎಂ.ಕೆ.ನಟರಾಜ್, ಸದ್ಯದ ಪರಿಸ್ಥಿತಿಯಲ್ಲಿ ಜಾಮೀನು ಅರ್ಜಿ ಪ್ರಸ್ತಾಪಿಸುವುದು ಸೂಕ್ತವಲ್ಲ. 9 ದಿನಗಳ ಕಾಲ ವಿಚಾರಣೆ ನಡೆಸಲಾಗಿದೆ. ಇನ್ನೂ 5 ದಿನಗಳ ಕಾಲ ಕಸ್ಟಡಿಗೆ ಒಪ್ಪಿಸಿ ಎಂದು ಇಡಿ ನ್ಯಾಯಾಲಯಕ್ಕೆ ಮನವಿ ಮಾಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಡಿಕೆ ಶಿವಕುಮಾರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ, ನಮ್ಮಕಕ್ಷಿದಾರರು ತೀವ್ರ ಅನಾರೋಗ್ಯಪೀಡಿತರಾಗಿದ್ದಾರೆ. ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಬೇಕಾಗಿದೆ. ಎಷ್ಟು ಒತ್ತಡವನ್ನು ಡಿಕೆಶಿ ಸಹಿಸಿಕೊಳ್ಳಲು ಸಾಧ್ಯ? ಆಸ್ತಿ ಮುಚ್ಚಿಟ್ಟಿದ್ದಾರೆ ಎಂದು ತೀರ್ಮಾನಿಸುವವರು ಯಾರು ಎಂದು ಪ್ರಶ್ನಿಸಿದರು.

ಇದಕ್ಕೂ ಮುನ್ನ ವಾದ ಮಂಡಿಸಿದ ಇಡಿ ಪರ ವಕೀಲರು, ಡಿಕೆ ಶಿವಕುಮಾರ್‌ ಹಾಗೂ ಸಹಚರರು ಒಟ್ಟು 317 ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿದ್ದು, ವಹಿವಾಟು ನಡೆಸಿದ್ದಾರೆ. 200 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತದ ವರ್ಗಾವಣೆ ಮಾಡಿದ್ದಾರೆ. ಇದಕ್ಕೆ ಸೂಕ್ತ ದಾಖಲೆಗಳು ಸಲ್ಲಿಸಿಲ್ಲ ಎಂದು ನ್ಯಾಯಾಲಯದ ಗಮನ ಸೆಳೆದರು.

ಡಿಕೆ ಶಿವಕುಮಾರ್‌ ಅವರಿಂದ ಹೆಚ್ಚಿನ ಮಾಹಿತಿ ಪಡೆಯಬೇಕಾಗಿದೆ. ಸಮರ್ಪಕ ಉತ್ತರ ನೀಡಿಲ್ಲ. ಹೀಗಾಗಿ ಶಿವಕುಮಾರ್‌ ವಿಚಾರಣೆ ನಡೆಸಲು ಕಸ್ಟಡಿಗೆ ಒಪ್ಪಿಸಬೇಕೆಂದು ಇಡಿ ಪರ ವಕೀಲರು ಮನವಿ ಮಾಡಿದರು.

Sponsored :

Related Articles