ಪ್ರಜಾ ರಕ್ಷಣೆಗಾಗಿ ಏನು ಮಾಡಿದರೂ ತಪ್ಪಲ್ಲ.

532

ಕ್ರೂರವಾಗಿರಲಿ, ಪಾಪಕ್ಕೆ ಕಾರಣವಾಗಿರಲಿ, ದೋಷದಿಂದ ಕೂಡಿರಲಿ,
ಪ್ರಜೆಗಳ ರಕ್ಷಣೆಗಾಗಿ ಯಾವುದನ್ನೇ ಆದರೂ ಮಾಡುವುದು ರಾಜ್ಯಭಾರ ಮಾಡುವವರ ಕರ್ತವ್ಯ.
-ರಾಮಾಯಣ
~~~

ಹೊನ್ನುಡಿ 3

{ರಾಮಾಯಣದ ಸುಭಾಷಿತಗಳ ಅವಲೋಕನ}

ad

ವಿಶ್ವಾಮಿತ್ರರ ಯಜ್ಞರಕ್ಷಣೆಗೆ ರಾಮನನ್ನು ಕಳುಹಿಸಲು ವಸಿಷ್ಠರ ಮಾತಿನಂತೆ ಒಪ್ಪುತ್ತಾನೆ ದಶರಥ. ತಂದೆ, ತಾಯಿ, ಗುರು ವಸಿಷ್ಠರು ಮಂಗಲ ಮಾಡಿ ಕಳಿಸಿಕೊಡುತ್ತಾರೆ. ರಾಮನೊಂದಿಗೆ ಲಕ್ಷ್ಮಣನೂ ಹೊರಡುತ್ತಾನೆ. ಧನುರ್ಧಾರಿಗಳಾಗಿ, ಖಡ್ಗ ಹಿಡಿದು ವಿಶ್ವಾಮಿತ್ರರನ್ನು ಹಿಂಬಾಲಿಸುತ್ತಾರೆ ಇಬ್ಬರೂ.

ಸರಯೂ ನದಿಯ ದಕ್ಷಿಣ ತಟದಲ್ಲಿ ಬಲಾ ಮತ್ತು ಅತಿಬಲಾ ಎನ್ನುವ ಅಸ್ತ್ರವನ್ನು ಉಪದೇಶಿಸುತ್ತಾರೆ ವಿಶ್ವಾಮಿತ್ರರು ರಾಮನಿಗೆ. ಅಂದು ಅಲ್ಲಿಯೇ ಉಳಿಯುತ್ತಾರೆ.

ಮಾರನೆಯ ದಿನ ಅಲ್ಲಿಂದ ಮುಂದೆ ಸಾಗಿ ಗಂಗಾನದಿಯನ್ನು ತಲುಪುತ್ತಾರೆ. ಅಲ್ಲಿದ್ದ ಶಿವನ ತಪಸ್ಸು ಮಾಡಿದ, ಶಿವ ಮನ್ಮಥನನ್ನು ಸುಟ್ಟ ಸ್ಥಳದಲ್ಲಿ ವಸತಿ ಮಾಡುತ್ತಾರೆ. ಮಾರನೆಯ ದಿನ ಅಲ್ಲಿಂದ ಹೊರಟು ಗಂಗೆಯನ್ನು ದಾಟುತ್ತಾರೆ.

ಮುಂದೆ ಅವರಿಗೆ ಭಯಂಕರವಾದ ಕಾಡು ಸಿಗುತ್ತದೆ. ಅದೇಕೆ ಹಾಗೆಂದು ಕೇಳುತ್ತಾನೆ ರಾಮ.
ಆಗ ವಿಶ್ವಾಮಿತ್ರರು- ‘ಇದು ಮಲದ – ಕರೂಷ ದೇಶಗಳಿದ್ದ ಸ್ಥಳ. ಇಂದ್ರನ ಬ್ರಹ್ಮಹತ್ಯಾ ದೋಷವನ್ನು ನಿವಾರಿಸಿದ ಪುಣ್ಯಭೂಮಿ. ಇಲ್ಲೀಗ ದುಷ್ಟ ರಾಕ್ಷಸಿಯೊಬ್ಬಳು ಸೇರಿದ್ದಾಳೆ. ಅವಳೇ ತಾಟಕಿ. ಶಾಪಗ್ರಸ್ತ ಯಕ್ಷಿ ಅವಳು. ಅವಳು ಮತ್ತು ಅವಳ ಮಗ ಮಾರೀಚ ಇಬ್ಬರೂ ಸೇರಿ ಈ ನಾಡನ್ನು ನಾಶ ಮಾಡಿದ್ದಾರೆ.

ಸಂಪತ್ತನ್ನು ಕೊಳ್ಳೆ ಹೊಡೆದು ಜನರನ್ನು ಹಿಂಸಿಸಿದ್ದಾರೆ. ನರಭಕ್ಷಕಿ ಅವಳು. ಈಗ ನೀನು ಅವಳನ್ನು ಸಂಹಾರ ಮಾಡಬೇಕು. ಸ್ತ್ರೀಯನ್ನು ಕೊಲ್ಲುವುದು ಹೇಗೆ ಎಂದು ಯೋಚಿಸಬೇಡ.
ಕ್ರೂರವಾಗಿರಲಿ, ಪಾಪಕ್ಕೆ ಕಾರಣವಾಗಿರಲಿ, ದೋಷದಿಂದ ಕೂಡಿರಲಿ, ಪ್ರಜೆಗಳ ರಕ್ಷಣೆಗಾಗಿ ಯಾವುದನ್ನೇ ಆದರೂ ಮಾಡುವುದು ರಾಜ್ಯಭಾರ ಮಾಡುವವರ ಕರ್ತವ್ಯ. ಇದು ಸನಾತನ ಧರ್ಮ.’ ಎನ್ನುತ್ತಾರೆ.
~~~~~

ನೃಶಂಸ-ಮನೃಶಂಸಂ ವಾ
ಪ್ರಜಾ-ರಕ್ಷಣ-ಕಾರಣಾತ್ |
ಪಾತಕಂ ವಾ ಸದೋಷಂ ವಾ
ಕರ್ತವ್ಯಂ ರಕ್ಷತಾ ಸತಾ ||
ರಾಜ್ಯ-ಭಾರ-ನಿಯುಕ್ತಾನಾಮ್
ಏಷ ಧರ್ಮಃ ಸನಾತನಃ ||

 

 

ಲೇಖನ : ವಿದ್ವಾನ್ ಜಗದೀಶಶರ್ಮಾ ಸಂಪ

Sponsored :

Related Articles