ಮುಖ್ಯಮಂತ್ರಿ ಹುದ್ದೆಗೆ ಇದು ಶೋಭೆ ತರುವಂತಹದ್ದಲ್ಲ – ಸುಮಲತಾ ಅಂಬರೀಶ್‌!!

3804

ಮುಖ್ಯಮಂತ್ರಿಗಳು ಮಂಡ್ಯದಲ್ಲಿ ಆಡಳಿತ ಯಂತ್ರವನ್ನು ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನನ್ನ ಮನೆ ಬಳಿ ಗುಪ್ತಚರ ಹಾಗೂ ಪೊಲೀಸರನ್ನು ಬಿಟ್ಟಿದ್ದು, ನಮ್ಮ ದೂರವಾಣಿ ಕದ್ದಾಲಿಕೆ ಮೂಲಕ ಕೆಳಮಟ್ಟದ ರಾಜಕಾರಣ ಮಾಡುತ್ತಿದ್ದಾರೆಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ಗಂಭೀರ ಆರೋಪ ಮಾಡಿದ್ದಾರೆ.

ad

ಸೋಮವಾರ ಮಧ್ಯಾಹ್ನ ರಾಜ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ, ಕ್ಷೇತ್ರದಲ್ಲಿ ಆಗುತ್ತಿರುವ ನೀತಿ ಸಂಹಿತೆ ಉಲ್ಲಂಘನೆಗಳ ಬಗ್ಗೆ ದೂರು ಸಲ್ಲಿಸಿದ ಅವರು, ಮತದಾರರಿಗೆ ಹಣ ಹಂಚಿಕೆ ಮಾಡಲಾಗುತ್ತಿದೆ. ಜತೆಗೆ ನಾವು ಆಯೋಜಿಸುವ ಕಾರ್ಯಕ್ರಮಗಳು ಹಾಗೂ ಸಮಾವೇಶಗಳಲ್ಲಿ ಉದ್ದೇಶಪೂರ್ವಕವಾಗಿ ವಿದ್ಯುತ್‌ ಕಡಿತಗೊಳಿಸುತ್ತಿದ್ದು, ಬೆದರಿಕೆ ಹೇಳಿಕೆಗಳು ಹೆಚ್ಚಾಗುತ್ತಿವೆ. ಹೀಗಾಗಿ ಸೂಕ್ತ ಭದ್ರತೆ ನೀಡಬೇಕೆಂದು ಕೋರಿದ್ದಾರೆ.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ಎಂಬ ಹೋರಾಟದಲ್ಲಿ ನೇರವಾಗಿ ಬಂದರೆ ಹೋರಾಡಬಹುದು. ಆದರೆ, ಹಿಂಬಾಗಿಲಿನಿಂದ ಬಂದು ಬೆನ್ನಿಗೆ ಚೂರಿ ಹಾಕುವಂತಹ ರಾಜಕೀಯ ಮಾಡುತ್ತಿದ್ದಾರೆ. ಯಾರು, ಏನೆಲ್ಲ ಮಾಡುತ್ತಿದ್ದಾರೆ ಎಂಬುದು ಜನರಿಗೆ ಅರ್ಥವಾಗಿದೆ. ಸಮಾವೇಶದಲ್ಲಿ ಪಾಲ್ಗೊಳ್ಳಲು ಪ್ರತಿಸ್ಪರ್ಧಿಗಳು ಮನೆಗೆ ಸಾವಿರ ರೂ.ಗಳಂತೆ ಹಂಚಿದ್ದಾರೆ. ಈ ಎಲ್ಲಾ ಅಂಶಗಳ ಕುರಿತು ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ ಎಂದರು.

ಅವರ ಪರವಾಗಿ ಕುಟುಂಬದವರೆಲ್ಲ ಪ್ರಚಾರ ಮಾಡಬಹುದು. ಅದೇ ನನ್ನ ಪರವಾಗಿ ಯಾರಾದರೂ ಪ್ರಚಾರಕ್ಕೆ ಬಂದರೆ ಟಾರ್ಗೆಟ್‌ ಮಾಡುತ್ತಾರೆ. ಅವರ ಪರವಾಗಿ ಮುಖ್ಯಮಂತ್ರಿಗಳು, 8 ಶಾಸಕರು, 3 ಸಚಿವರು, ಒಬ್ಬರು ಸಂಬಂಧಿ ಸಚಿವರು ಹಾಗೂ ಶಾಸಕಿ ತಾಯಿ ಇದ್ದಾರೆ. ಇಷ್ಟೆಲ್ಲ ಬಲ ಇಟ್ಟುಕೊಂಡೂ ನನ್ನ ಪರ ಪ್ರಚಾರ ಮಾಡುವವರನ್ನು ಏಕೆ ಟಾರ್ಗೆಟ್‌ ಮಾಡುತ್ತೀರಾ ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಅವರು ಒಬ್ಬ ನಿಖೀಲ್‌ ವಿರುದ್ಧ ಎಲ್ಲರೂ ಒಂದಾಗಿದ್ದಾರೆಎಂದು ಹೇಳಿರುವುದಕ್ಕೆ ಅರ್ಥವಿದೆಯೇ? ನಾನು ಒಂಟಿ ಮಹಿಳೆಯಾಗಿ ಜನರ ಸೇವೆ ಮಾಡಲು ಚುನಾವಣೆಗೆ ನಿಂತಿದ್ದೇನೆ. ಆದರೆ, ಹಿಂಬಾಗಿಲಿನ ಮೂಲಕ ವಿದ್ಯುತ್‌ ತೆಗೆಯುವುದು, ಕೇಬಲ್‌ ತೆಗೆಯುವಂತಹ ಕೆಲಸಗಳನು ಯಾರೂ ಮಾಡಬಾರದು ಎಂದರು.

Sponsored :

Related Articles