ಉಡುಪಿ ಕೃಷ್ಣಮಠಕ್ಕೂ ತಟ್ಟಿದ ನೀರಿನ ಬರ! ಪ್ರವಾಸಿಗರು-ಭಕ್ತರಿಗೆ ನೀರು ಒದಗಿಸಲಾಗದೇ ಪರದಾಟ!!

730

ಕಡಗೋಲು ಕೃಷ್ಣನ ಮಠದಲ್ಲೂ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ. ರಜೆ ಅಂತ ಪ್ರತಿದಿನ ಸಾವಿರಾರು ಪ್ರವಾಸಿಗರು ಕೃಷ್ಣಮಠಕ್ಕೆ ಭೇಟಿ ಕೊಡ್ತಾರೆ. ಭಕ್ತರ ಬೇಡಿಕೆಗೆ ಬೇಕಾದ ನೀರು ಹಂಚಲು ಮಠದಲ್ಲಿ ವ್ಯವಸ್ಥೆ ಇಲ್ಲ. ಮಠಕ್ಕೆ ಬರಬೇಡಿ ಎಂದು ಭಕ್ತರಿಗೆ ಹೇಳುವಂತಿಲ್ಲ, ಬಂದ ಭಕ್ತರನ್ನು ಸುಧಾರಿಸದೆ ವಿಧಿಯಿಲ್ಲ! ಉಭಯ ಸಂಕಟದಲ್ಲಿರುವ ಕೃಷ್ಣಮಠದ ಆಡಳಿತ ಮಂಡಳಿಯು ನೀರಿಗಾಗಿ ಏನೆಲ್ಲಾ ಹರಸಾಹಸ ಪಡುತ್ತಿದೆ ನೋಡಿ.

ad

ಇದು ಉಡುಪಿಯ ಕೃಷ್ಣಮಠದ ಮಧ್ವಸರೋವರ, ಸಪ್ತೋತ್ಸವದ ವೇಳೆ ಈ ಪುಷ್ಕರಣಿಯಲ್ಲಿ ನಡೆಯುವ ತೆಪ್ಪೋತ್ಸವದ ವೈಭವ ನೋಡಿದ್ದೇವೆ. ಆದ್ರೆ ನೀರಿಲ್ಲದೆ ಪಾತಾಳ ಕಾಣುವ ಈ ದೃಶ್ಯವನ್ನೂ ಒಮ್ಮೆ ನೋಡಿ. ಉಡುಪಿಯಲ್ಲಿ ಸದ್ಯ ನೀರಿಗೆ ಉಂಟಾಗಿರುವ ಬರದ ಸ್ಥಿತಿಗೆ ಇದು ಕೈಗನ್ನಡಿ ಹಿಡಿದಂತಿದೆ. ಸ್ವಾಮೀಜಿ ನಡೆಸುವ ದೈನಂದಿನ ಅನುಷ್ಟಾನಗಳಿಗೆ ಹೊರತುಪಡಿಸಿ ಮಧ್ವಸರೋವರಲ್ಲಿ ನೀರು ಲಭ್ಯವಿಲ್ಲ.

ರಜಾದಿನಗಳಾದ ಕಾರಣ ಪ್ರತಿದಿನ ಸಾವಿರಾರು ಮಂದಿ ಉಡುಪಿಯ ಮಠಕ್ಕೆ ಭೇಟಿ ನೀಡುತ್ತಾರೆ. ಐದಾರು ಸಾವಿರ ಜನರಿಗೆ ದೈನಂದಿನ ಊಟೋಪಚಾರ ವ್ಯವಸ್ಥೆ ಮಾಡುವ ಸವಾಲಿದೆ. ಹಾಗಾಗಿ 12 ರಿಂದ 15 ಟ್ಯಾಂಕರ್ ಗಳಲ್ಲಿ ಕುಡಿಯುವ ನೀರು ತರಿಸಲಾಗುತ್ತಿದೆ. ವೀಕ್ ಎಂಡ್ ಬಂದ್ರೆ ದೈನಂದಿನ ಬಳಕೆಗೆ 20 ಟ್ಯಾಂಕರ್ ನೀರು ಬೇಕಾಗುತ್ತೆ. ಉಡುಪಿಯ ಕೃಷ್ಣನನ್ನು ಅನ್ನಬ್ರಹ್ಮ ಎಂದೇ ಕರೆಯುತ್ತಾರೆ, ಹಾಗಾಗಿ ಪ್ರತಿದಿನ ಎರಡು ಹೊತ್ತು ದಾಸೋಹ ತಪ್ಪಿಸುವಂತಿಲ್ಲ. ನೀರಿಗಾಗಿಯೇ ಮಠದವರು 20 ಲಕ್ಷ ರುಪಾಯಿಯಷ್ಟು ವ್ಯಯಿಸಬೇಕಾಗಿದೆ.

ಸ್ವರ್ಣೆ ಉಡುಪಿಯ ಜೀವನದಿ. ಈ ನದಿ ಬತ್ತಿಹೋಗಿ 15 ದಿನವಾಯ್ತು. ರೇಷನ್ ಸಿಸ್ಟಮ್ ನಲ್ಲಿ ವಾರಕ್ಕೊಮ್ಮೆ ನಗರಕ್ಕೆ ನೀರು ಸರಭರಾಜಾಗುತ್ತಿದೆ. ನಗರಸಭೆಯ ನೀರನ್ನೇ ಅವಲಂಭಿಸಿರುವ ಮಠದ ಪರಿಸರದ ಲಾಡ್ಜ್ ಗಳು ಬಹುತೇಖ ಮುಚ್ಚಿವೆ. ಬೇಡಿಕೆಗೆ ತಕ್ಕಂತೆ ಟ್ಯಾಂಕರ್ ನೀರು ಲಭ್ಯವಾಗದೇ ಇರೋದು ಇದಕ್ಕೆ ಕಾರಣ! ಇನ್ನು ಸಾರ್ವಜನಿಕ ಶೌಚಾಲಯಗಳನ್ನು ಕೂಡಾ ದಿನದ ಕೆಲವು ಗಂಟೆಗಳ ಕಾಲ ಮುಚ್ಚಬೇಕಾದ ಪರಿಸ್ಥತಿ ಎದುರಾಗಿದೆ.

ಇದರಿಂದ ದೂರದ ಊರಿನಿಂದ ಬರುವ ಪ್ರವಾಸಿಗರಿಗೆ ಕಷ್ಟವಾಗುತ್ತಿದೆ. ಮಾಸಾಂತ್ಯದಲ್ಲಿ ಕೃಷ್ಣಮಠದ ಮೇಲ್ಛಾವಣಿಗೆ 40 ಕೋಟಿ ವೆಚ್ಚದ ಚಿನ್ನದ ಹೊದಿಕೆ ಹೊದಿರುವ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಸಾವಿರಾರು ಜನರು ಮಠಕ್ಕೆ ಭೇಟ ಕೊಡಲಿದ್ದಾರೆ. ಈ ಮಹೋತ್ಸವವನ್ನು ನಿಭಾಯಿಸುವುದು ಹೇಗೆ ಎಂದು ಆಡಳಿತಮಂಡಳಿ ತಲೆಮೇಲೆ ಕೈ ಹೊತ್ತು ಕುಳಿತಿದೆ. ದಿನ ಬೆಳಗಾದ್ರೆ ಮಠದ ಸಿಬ್ಬಂದಿಗಳು ಪರಿಸರದ ಯಾವ ಬಾವಿಯಲ್ಲಿ ನೀರಿದೆ ಎಂದು ತಲಾಶ್ ಗೆ ಹೊರಡುತ್ತಾರೆ.

Sponsored :

Related Articles