ಇದು ನಾವು ಮರೆತ ನಮ್ಮ ಇತಿಹಾಸ- ಕಾಯಕಲ್ಪಕ್ಕೆ ಕಾಯುತ್ತಿದೆ ಕರ್ನಾಟಕದ ಜಲಿಯನ್ ವಾಲಾಬಾಗ್!

293

 

ad

ನಾಳೆ ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆಯನ್ನ ಆಚರಿಸಿ ಸಂಭ್ರಮಿಸುತ್ತೇವೆ. ಆದ್ರೆ, ನಮ್ಮ ಈ ಸ್ವಾತಂತ್ರ್ಯಕ್ಕೊಸ್ಕರ ಹೋರಾಡಿ ವೀರ ಮರಣವನ್ನಪ್ಪಿದ ಹುತಾತ್ಮರನ್ನ, ಹೋರಾಟದ ಸ್ಥಳಗಳನ್ನ ಹೀಗೆ ಎಲ್ಲವನ್ನು ಮರೆತು ಬಿಟ್ಟಿದ್ದೇವೆ. ಕರ್ನಾಟಕದಲ್ಲೂ ಅಂತಹ ಸಾಕಷ್ಟು ಸ್ಥಳಗಳಿವೆ. ಅವುಗಳ ಪೈಕಿ ಕರ್ನಾಟಕದ ಜಲಿಯನ್ ವಾಲಾಬಾಗ್​ ಎಂದೇ ಕರೆಸಿಕೊಳ್ಳುವ ಗೌರಿಬಿದನೂರಿನ ವಿದುರಾಶ್ವತ್ಥ ಕೂಡ ಒಂದು.
ಹೌದು ಗೌರಿಬಿದನೂರಿನ ವಿದುರಾಶ್ವತ್ಥ ಕ್ಷೇತ್ರ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ತನ್ನದೇ ಆದ ಕೊಡುಗೆ ನೀಡಿದೆ. ಆದರೇ ಈಗಿಗ ಸೂಕ್ತ ಪ್ರಚಾರದ ಕೊರತೆಯಿಂದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ನೆನಪು ಮಾಸಿ ಹೋಗುತ್ತಿದೆ.

ಅದು 1938 ಏಪ್ರಿಲ್ 25. ಈಗಿನ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ವಿಧುರಾಶ್ವಥದಲ್ಲಿ 15 ದಿನಗಳ( ಏಪ್ರಿಲ್ 14 ರಿಂದ 29 ರವರೆಗೆ) ಕಾಲ ಭರ್ಜರಿ ದೇವರ ಉತ್ಸವ, ಜಾತ್ರೆಗಳು ನಡೆಯುತ್ತಿದ್ದವು. ಈ ಸಮಯದಲ್ಲಿ ಸ್ವಾತಂತ್ರ್ಯಕೊಸ್ಕರ ದೇಶಾದ್ಯಂತ ಪ್ರತಿಭಟನೆಗಳು, ಹೋರಾಟಗಳು ನಡೆಯುತ್ತಿದ್ದವು.

ವಿಧುರಾಶ್ವಥ ಜಾತ್ರೆಯಲ್ಲಿ ರಾಜ್ಯ ಹಾಗೂ ನೆರೆ ಆಂಧ್ರದ ಅಪಾರ ಜನಸಮೂಹ ಬರುತ್ತಾರೆ, ಅವರಿಗೆ ಸ್ವಾತಂತ್ರ್ಯೋತ್ಸವದ ಅರಿವು ಮೂಡಿಸುವ ಉದ್ದೇಶದಿಂದ ಧ್ವಜ ಸತ್ಯಾಗ್ರಹ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು. ಆದ್ರೆ, ಆ ವೇಳೆ ಸ್ಥಳಕ್ಕಾಗಮಿಸಿದ ವಿವೇಚನಾರಹಿತ ಅಧಿಕಾರಿಗಳು ಹಿಂದು ಮುಂದು ನೋಡದೇ ಏಕಾಏಕಿ ಗುಂಡಿನ ದಾಳಿ ನಡೆಸಿದ್ದರಿಂದ ಗರ್ಭೀಣಿ ಮಹಿಳೆ ಸೇರಿ 32 ಮಂದಿ ವೀರ ಮರಣವನ್ನಪ್ಪಿದರು…..

ಪಂಜಾಬ್ ನ ಅಮೃತಸರದ ಜಲಿಯನ್ ವಾಲಾಬಾಗ್ ರೀತಿಯಲ್ಲೇ ಗೌರಿಬಿದನೂರಿನ ವಿಧುರಾಶ್ವಥದಲ್ಲೂ ಪೊಲೀಸರ ಗುಂಡಿನ ಮೊರೆತ ಆಗಿ ಹತ್ತಾರು ಮಂದಿ ಹುತಾತ್ಮರಾಗಿದ್ದರಿಂದ ವಿಧುರಾಶ್ವಥವನ್ನ ಕರ್ನಾಟಕ ಜಲಿಯನ್ ವಾಲಾಬಾಗ್ ಎಂದು ಕರೆಯುತ್ತಾರೆ.

ಸ್ವಾತಂತ್ರ್ಯ ಚಳವಳಿಯ ಇತಿಹಾಸದ ಪುಟ ಸೇರಿದ ಕರ್ನಾಟಕದ ಜಲಿಯನ್ ವಾಲಾಬಾಗ್ ವಿಧುರಾಶ್ವಥದ ಘಟನೆ ಬಳಿಕ ಸಂಸ್ಥಾನದ ಸ್ವಾತಂತ್ರ್ಯದ ಹೋರಾಟದ ದಿಕ್ಕೆ ಬದಲಿಸಿತು. ಗುಂಡೇಟಿಗೆ ಬಲಿಯಾದ ಹುತಾತ್ಮರ ಹಾಗೂ ನಿಸ್ವಾರ್ಥ ತ್ಯಾಗಜೀವಿ ದೇಶಪ್ರೇಮಿಗಳ ಚಿರಸ್ಮರಣೆಗಾಗಿ ವಿಧುರಾಶ್ವಥದಲ್ಲಿ ಸ್ಮಾರಕ ನಿರ್ಮಿಸಲಾಗಿದೆ. ಇನ್ನೂ ಸ್ವಾತಂತ್ರ್ಯ ಘಟನಾವಳಿಗಳನ್ನ ಮೇಲುಕು ಹಾಕಲು ವೀರಸೌಧದಲ್ಲಿ ಸ್ಥಿರಚಿತ್ರಗಳು ಹಾಗೂ ಅವರ ಜೀವನ ಚರಿತ್ರೆಗಳ ಪುಸ್ತಕಗಳನ್ನ ಗ್ರಂಥಾಲಯದಲ್ಲಿ ಇಡಲಾಗಿದೆ. ರಾಜ್ಯ ಹಾಗೂ ಕೇಂದ್ರದಿಂದ ವಿಧುರಾಶ್ವಥ ಅಭಿವೃದ್ದಿಗೆ ಕೋಟ್ಯಾಂತರ ರೂಪಾಯಿ ಮೀಸಲಿಟ್ಟಿದ್ದರೂ, ಸಂಬಂಧಪಟ್ಟವರ ನಿರ್ಲಕ್ಷ್ಯದಿಂದ ಮೂಲೆ ಗುಂಪಾಗುತ್ತಿದೆ…..ಒಟ್ನಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಕ್ರಾಂತಿವೀರರ ಚರಿತ್ರೆಯನ್ನ ತಿಳಿಸಲು ಮಾರ್ಗದರ್ಶಕರ ಕೊರತೆ, ಪ್ರಚಾರದ ಸಮಸ್ಯೆಯಿಂದ ಕರ್ನಾಟಕದ ಜಲಿಯನ್ ವಾಲಾಬಾಗ್ ನ್ನ ಜನ ಮರೆಯುವಂತಾಗಿದೆ. ಇನ್ನಾದ್ರೂ ಸರ್ಕಾರ ಎಚ್ಚೆತ್ತು ಸ್ವಾತಂತ್ರ್ಯಕ್ಕಾಗಿ ಮಡಿದವರ ಹೋರಾಟವನ್ನ ಜನರಿಗೆ ತಿಳಿಸುವ ಕೆಲಸ ಮಾಡಬೇಕಾಗಿದೆ….

Sponsored :

Related Articles